ನವದೆಹಲಿ : ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾ ತಕ್ಷಣ ಯುದ್ಧ ನಿಲ್ಲಿಸಿ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಬೇಕಾಗಿ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರ ಬಳಿ ಮನವಿ ಮಾಡಿದ್ದಾರೆ.
ಉಕ್ರೇನ್ ವಿರುದ್ಧ ಯುದ್ಧ ಆರಂಭವಾಗುತ್ತಿದ್ದಂತೆ ಭಾರತದ ಪ್ರಧಾನಿ ಮೋದಿ ಮಧ್ಯಪ್ರವೇಶಿಸಬೇಕೆಂಬ ಮಾತು ಎಲ್ಲೆಡೆಯಿಂದ ಕೇಳಿಬರುತ್ತಿತ್ತು. ಇದೀಗ ಮೋದಿ, ಪುಟಿನ್ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಿ ಯುದ್ಧ ನಿಲ್ಲಿಸಿ ಎಂದು ಮನವಿ ಮಾಡಿ ಉಕ್ರೇನ್ನ ಸದ್ಯದ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಪುಟಿನ್ ಜೊತೆ ಸುಮಾರು 25 ನಿಮಿಷಗಳ ಮಾತುಕತೆ ನಡೆಸಿದ ಮೋದಿ, ಯುದ್ಧದಿಂದಾಗಿ ಉಕ್ರೇನ್ನಲ್ಲಿರುವ ಭಾರತೀಯರ ಬಗ್ಗೆ ವಿಶೇಷವಾಗಿ ಮಾತುಕತೆ ನಡೆಸಿದ್ದು, ಅವರ ಸುರಕ್ಷತೆ ಮುಖ್ಯ ಎಂದಿದ್ದಾರೆ. ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇದ್ದು ಅವರು ಸುರಕ್ಷಿತವಾಗಿ ಭಾರತಕ್ಕೆ ಮರಳುವಂತಾಗಬೇಕೆಂದು ಸ್ಪಷ್ಟಪಡಿಸಿದ್ದಾರೆ.
ರಷ್ಯಾ ಮತ್ತು ನ್ಯಾಟೋ ನಡುವಿನ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಮಾತ್ರ ಪರಿಹರಿಸಬಹುದು ಯುದ್ಧದಿಂದ ಅತಿ ಹೆಚ್ಚು ಹಾನಿಯಾಗಲಿದೆ. ಭಾರತೀಯಯರ ರಕ್ಷಣೆಗೆ ಭಾರತದ ರಾಜತಾಂತ್ರಿಕರು ನಿರಂತರ ಸಂಪರ್ಕ ಹೊಂದಲಿದ್ದಾರೆ ಎಂದು ಮೋದಿಮನವಿ ಮಾಡಿದ್ದು, ಭಾರತದ ಜೊತೆಗೆ ಸಂಪರ್ಕದಲ್ಲಿರುವುದಾಗಿ ಪುಟಿನ್ ಭರವಸೆ ನೀಡಿದರು.