ಅಫ್ಘಾನ್ ಗೆ ಅಂತರಾಷ್ಟ್ರೀಯ ವಿಮಾನ ಸಂಚಾರ ಆರಂಭಿಸಲು ತಾಲಿಬಾನ್ ಕೋರಿಕೆ

ಸೋಮವಾರ, 27 ಸೆಪ್ಟಂಬರ್ 2021 (09:52 IST)
ಕಾಬೂಲ್, ಸೆ.27 : ಕಾಬೂಲ್ ವಿಮಾನ ನಿಲ್ದಾಣದ ಸಮಸ್ಯೆ ಪರಿಹಾರವಾಗಿದ್ದು ಅಂತರಾಷ್ಟ್ರೀಯ ವಿಮಾನಗಳ ಕಾರ್ಯನಿರ್ವಹಣೆಗೆ ಎಲ್ಲಾ ಸಹಕಾರ ಒದಗಿಸಲಾಗುವುದು. ಆದ್ದರಿಂದ ತಕ್ಷಣ ಅಫ್ಘಾನ್ ಗೆ ಅಂತರಾಷ್ಟ್ರೀಯ ವಿಮಾನಯಾನ ಪುನರಾರಂಭಿಬೇಕು ಎಂದು ತಾಲಿಬಾನ್ ವಿನಂತಿಸಿದೆ.

ನೂತನ ಸರಕಾರ ದೇಶದಲ್ಲಿನ ಚಟುವಟಿಕೆ ಮತ್ತೆ ಸಕ್ರಿಯಗೊಳ್ಳಲು ಮತ್ತು ಸರಕಾರಕ್ಕೆ ಅಂತರಾಷ್ಟ್ರೀಯ ಮಾನ್ಯತೆ ಪಡೆದುಕೊಳ್ಳಲು ಉಪಕ್ರಮಗಳಿಗೆ ವೇಗ ನೀಡಿದೆ ಎಂದು ಅಫ್ಘಾನಿಸ್ತಾನದ ವಿದೇಶ ವ್ಯವಹಾರ ಇಲಾಖೆಯ ಹೇಳಿಕೆ ತಿಳಿಸಿದೆ. ಅಂತರಾಷ್ಟ್ರೀಯ ವಿಮಾನಗಳ ಸಂಚಾರವನ್ನು ಅಮಾನತುಗೊಳಿಸಿರುವುದರಿಂದ ಹಲವು ಅಫ್ಘಾನೀಯರು ವಿದೇಶದಲ್ಲಿ ಅತಂತ್ರ ಸ್ಥಿತಿಯಲ್ಲಿದ್ದು ದೇಶಕ್ಕೆ ವಾಪಸಾಗಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಅಫ್ಘಾನ್ನಿಂದ ವಿದೇಶಕ್ಕೆ ಉದ್ಯೋಗ, ಶಿಕ್ಷಣಕ್ಕೆ ತೆರಳುವವರಿಗೂ ಸಮಸ್ಯೆಯಾಗಿದೆ. ಕಾಬೂಲ್ ವಿಮಾನ ನಿಲ್ದಾಣವನ್ನು ಮತ್ತೆ ಸುಸ್ಥಿತಿಗೆ ತರಲಾಗಿದ್ದು ಸ್ಥಳೀಯ ಮತ್ತು ಅಂತರಾಷ್ಟ್ರೀಯ ವಿಮಾನ ಯಾನಕ್ಕೆ ಎಲ್ಲಾ ಅನುಕೂಲಗಳಿವೆ ಎಂದು ವಿದೇಶ ವ್ಯವಹಾರ ಇಲಾಖೆಯ ವಕ್ತಾರ ಅಬ್ದುಲ್ ಖಹರ್ ಬಾಲ್ಖಿ ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿದ್ದವರನ್ನು ತೆರವುಗೊಳಿಸುವ ಕಾರ್ಯಾಚರಣೆಯ ಸಂದರ್ಭ ಕಾಬೂಲ್ ವಿಮಾನ ನಿಲ್ದಾಣಕ್ಕೆ ಹಾನಿಯಾಗಿತ್ತು. ಬಳಿಕ ಖತರ್ ಹಾಗೂ ಟರ್ಕಿಯ ತಾಂತ್ರಿಕ ನೆರವಿನಿಂದ ಇದನ್ನು ಸರಿಪಡಿಸಲಾಗಿದ್ದು ಪಾಕಿಸ್ತಾನದ ವಿಮಾನಯಾನ ಸಂಸ್ಥೆ ಸಹಿತ ಕೆಲವು ಅಂತರಾಷ್ಟ್ರೀಯ ವಿಮಾನಗಳು ಸೀಮಿತ ಸಂಚಾರ ನಡೆಸುತ್ತಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ