ನವಾಜ್ ಷರೀಫ್ ಸರ್ಕಾರ ಪತನ ಸಾಧ್ಯತೆ: ಸೇನೆ- ಸರಕಾರ ಮಧ್ಯೆ ಬಿಕ್ಕಟ್ಟು ಉಲ್ಬಣ
ಗುರುವಾರ, 6 ಅಕ್ಟೋಬರ್ 2016 (17:55 IST)
ಪ್ರಧಾನಮಂತ್ರಿ ನವಾಜ್ ಷರೀಫ್ ನೇತೃತ್ವದ ಸರಕಾರ ದೇಶದ ಇಮೇಜ್ ಕೆಡಲು ಸೇನೆ ಕಾರಣವಾಗಿದೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಸೇನೆ ಮತ್ತು ಸರಕಾರದ ಮಧ್ಯೆ ತಿಕ್ಕಾಟ ಆರಂಭವಾಗಿದೆ. ಷರೀಫ್ ಪದಚ್ಯುತಿಯಾಗಲಿದೆ ಎನ್ನುವ ವದಂತಿಗಳು ಹರಡಿವೆ.
ಉತ್ತರ ಕಾಶ್ಮಿರದಲ್ಲಿನ ಉರಿ ಸೇನಾ ಕೇಂದ್ರದ ಮೇಲೆ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಿಒಕೆಯಲ್ಲಿ ಸೀಮಿತ ದಾಳಿ ನಡೆಸಿರುವುದು ಪಾಕ್ ಪ್ರತಿಷ್ಠೆಗೆ ಧಕ್ಕೆ ತಂದಿದೆ ಎಂದು ನವಾಜ್, ಸೇನಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಪಾಕಿಸ್ತಾನದ ಸೇನೆ ಉಗ್ರಗಾಮಿ ಸಂಘಟನೆಗಳಾದ ಜೈಷ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೊಯಿಬಾಗೆ ಬೆಂಬಲ ನೀಡುತ್ತಿರುವುದರಿಂದ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಪಾಕಿಸ್ತಾನಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಗುಡುಗಿದ್ದಾರೆ.
ಇತ್ತೀಚೆಗೆ ಪಾಕಿಸ್ತಾನದಲ್ಲಿ ನಡೆಯಬೇಕಾಗಿದ್ದ ಸಾರ್ಕ್ ಸಮ್ಮೇಳನ ಕೂಡಾ ರದ್ದಾಗಿದ್ದರಿಂದ ಪಾಕ್ ಏಕಾಂಗಿಯಾಗಿದೆ. ಸಾರ್ಕ್ ಸಮ್ಮೇಳನವನ್ನು ನಾಲ್ಕು ರಾಷ್ಟ್ರಗಳು ಬಹಿಷ್ಕಾರ ಹಾಕಿದ್ದರಿಂದ ದೇಶದ ಇಮೇಜ್‌ಗೆ ಕೆಟ್ಟ ಹೆಸರು ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದ ಸೇನಾ ಮುಖ್ಯಸ್ಥ ರಾಹಿಲ್ ಷರೀಫ್ ಕೂಡಾ ರಾಜಕೀಯ ಆಕಾಂಕ್ಷೆಗಳನ್ನು ಹೊಂದಿರುವುದರಿಂದ ಷರೀಫ್ ಸರಕಾರವನ್ನು ಪತನಗೊಳಿಸಿ ಸೇನಾ ಸರಕಾರವನ್ನು ಅಧಿಕಾರಕ್ಕೆ ತರಲಿದ್ದಾರೆಯೇ ಎನ್ನುವ ಆತಂಕ ಪಾಕಿಸ್ತಾನದ ಜನತೆಯಲ್ಲಿ ಕಾಡುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ