ಬೌ..ಬೌ..! ಈ ನಾಯಿ ಮನುಷ್ಯರು ಮಾಡಬೇಕಾದ ಕೆಲಸ ಮಾಡುತ್ತದೆ!
ಶನಿವಾರ, 8 ಜುಲೈ 2017 (10:03 IST)
ಬೀಜಿಂಗ್: ಪರಿಸರವಾದಿಗಳು, ಕಾರ್ಯಕರ್ತರು ನಮ್ಮ ಸುತ್ತಮುತ್ತಲ ಪ್ರದೇಶ ಶುಚಿಯಾಗಿರಬೇಕು ಎಂದು ಏನೇನೋ ಕೆಲಸಗಳನ್ನು ಮಾಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ನಾಯಿಯೂ ಆ ಕೆಲಸ ಮಾಡುತ್ತಿದೆ. ಅದೆಂಥಾ ನಾಯಿಯಪ್ಪಾ ಎನ್ನುತ್ತೀರಾ? ಇದನ್ನು ಓದಿ.
ಚೀನಾದ ಸುಝೋ ಎಂಬಲ್ಲಿ ನದಿಯೊಂದು ಇದೆ. ಇಲ್ಲಿಗೆ ನಿತ್ಯ ನೂರಾರು ಜನರು ಭೇಟಿ ನೀಡುತ್ತಾರೆ. ಆದರೆ ನಾಗರಿಕರು ಎನಿಸಿಕೊಂಡ ಮನುಷ್ಯರು ನೀರು ಕುಡಿದು ಬಾಟಲಿಗಳನ್ನು ಸಿಕ್ಕ ಸಿಕ್ಕ ಹಾಗೆ ನದಿಗೆ ಎಸೆದು ಅದನ್ನು ಮಲಿನಗೊಳಿಸುತ್ತಾರೆ. ಈ ನಾಯಿ ಆ ಬಾಟಲಿಗಳನ್ನು ತನ್ನ ಬಾಯಿಯಲ್ಲಿ ಕಚ್ಚಿ ಹೊರಗೆಳೆದು ತರುತ್ತದೆ!
ನಿತ್ಯ ಹೀಗೆ ಸುಮಾರು 20 ಬಾಟಲಿಗಳನ್ನು ನಾಯಿ ಬಾಯಿಯಲ್ಲಿ ಕಚ್ಚಿಕೊಂಡು ಬರುತ್ತದಂತೆ. ಅಷ್ಟೇ ಅಲ್ಲ, ನದಿ ತಟದಲ್ಲಿರುವ ಕಸದ ಬುಟ್ಟಿಗೆ ತಂದು ಹಾಕುತ್ತದಂತೆ. ಸಾಮಾನ್ಯವಾಗಿ ನಾಯಿಗಳು ನೀರಲ್ಲಿ ಈಜುವುದು ಕಡಿಮೆ. ಆದರೆ ಈ ನಾಯಿ ನೀರಿಗಿಳಿದು ತೇಲುತ್ತಿರುವ ಬಾಟಲಿಗಳನ್ನು ಎತ್ತಿ ತರುತ್ತದಂತೆ. ಹೀಗೇ ಕಳೆದ 10 ವರ್ಷಗಳಲ್ಲಿ ಈ ನಾಯಿ ಸುಮಾರು 20 ಸಾವಿರ ಬಾಟಲಿಗಳನ್ನು ಹೊರಗೆಳೆದು ತಂದಿರಬಹದು ಎಂದು ಅಂದಾಜಿಸಲಾಗಿದೆ. ಈ ಸೂಪರ್ ಡಾಗ್ ಸಾಹಸ ಇದೀಗ ಆನ್ ಲೈನ್ ನಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.