ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ದಾಳಿ ಮಾಡಿದವರ ಹತ್ಯೆ: ಪಾಕ್

ಮಂಗಳವಾರ, 30 ಆಗಸ್ಟ್ 2016 (12:44 IST)
ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ 2009ರಲ್ಲಿ ದಾಳಿ ನಡೆಸಿದ್ದ ಆರೋಪವನ್ನೆದುರಿಸುತ್ತಿದ್ದ ಮೂವರು ಇಸ್ಲಾಂ ಮೂಲಭೂತವಾದಿಗಳು ಮತ್ತು ಮತ್ತೊಬ್ಬ ಶಂಕಿತ ಉಗ್ರ ಭಾನುವಾರ ಪೊಲೀಸರು ಮತ್ತು ಉಗ್ರರ ನಡುವಿನ ಶೂಟ್‌ ಔಟ್‌ ವೇಳೆ ಗುಂಡು ತಗುಲಿ ಮೃತಪಟ್ಟಿದ್ದಾರೆ ಎಂದು ಪಾಕ್ ಹೇಳಿದೆ. 

ನಾಲ್ವರು ಆರೋಪಿಗಳನ್ನು ಪೊಲೀಸ್ ವಾಹನದಲ್ಲಿ ಹಾಕಿಕೊಂಡು ಲಾಹೋರ್ ಬಳಿ ಹೋಗುತ್ತಿದ್ದಾಗ ಏಳರಿಂದ 8 ಗನ್ ಮ್ಯಾನ್‌ಗಳು ದಾಳಿ ನಡೆಸಿದರು. ನಾವು ಸಹ ಪ್ರತಿ ದಾಳಿ ನಡೆಸಿದೆವಾದರು ಗುಂಡಿನ ಚಕಮಕಿಯಲ್ಲಿ ನಾಲ್ವರು ಆರೋಪಿಗಳು ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ. 
 
ಪರಾರಿಯಾಗಿರುವ ದಾಳಿಕೋರರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪಂಜಾಬ್ ಭಯೋತ್ಪಾದನಾ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
 
2009ರಲ್ಲಿ ಪಾಕಿಸ್ತಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ಶ್ರೀಲಂಕನ್ ಕ್ರಿಕೆಟ್ ತಂಡ ಬಸ್ ಮೂಲಕ ಕ್ರೀಡಾಂಗಣದತ್ತ ಪ್ರಯಾಣಿಸುತ್ತಿದ್ದಾಗ ಕನಿಷ್ಠ 10 ಮಂದಿ ಗನ್ ಮ್ಯಾನ್‌ಗಳು ಅವರ ಮೇಲೆ ದಾಳಿ ನಡೆಸಿದ್ದರು. ಪರಿಣಾಮ 6 ಜನ ಕ್ರಿಕೆಟಿಗರು, ಓರ್ವ ಬ್ರಿಟಿಷ್ ಕೋಚ್ ಗಂಭೀರವಾಗಿ ಗಾಯಗೊಂಡಿದ್ದರೆ, 8 ಜನ ಪಾಕಿಸ್ತಾನಿ ನಾಗರಿಕರು ಸಾವನ್ನಪ್ಪಿದ್ದರು. 
 
ಆ ಬಳಿಕ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳನ್ನು ರದ್ದು ಮಾಡಿ, ಯುಎಇನಲ್ಲಿ ಆಡಿಸಲಾಯಿತು. 

ವೆಬ್ದುನಿಯಾವನ್ನು ಓದಿ