ವಾಷಿಂಗ್ಟನ್ : ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಖಾತೆಯನ್ನು ಬ್ಯಾನ್ ಮಾಡಿದ್ದ ಮೇಟಾ ಸಂಸ್ಥೆ ಇದೀಗ 2 ವರ್ಷಗಳ ನಿಷೇಧದ ಬಳಿಕ ಮರುಸ್ಥಾಪನೆಗೆ ಅವಕಾಶ ನೀಡುವುದಾಗಿ ತಿಳಿಸಿದೆ.
ಅಮೆರಿಕ ಸಂಸತ್ ಭವನದ ಮೇಲೆ 2021ರ ಜನವರಿ 6 ರಂದು ನಡೆದ ದಂಗೆಗೆ ಸಂಬಂಧಿಸಿದಂತೆ ಟ್ರಂಪ್ ಮಾಡಿದ್ದ ಫೇಸ್ಬುಕ್ ಪೋಸ್ಟ್ಗಳು ಪ್ರಚೋದನಕಾರಿಯಾಗಿದ್ದವು ಎಂಬ ಕಾರಣಕ್ಕೆ ಫೇಸ್ಬುಕ್ ಸಂಸ್ಥೆ ಟ್ರಂಪ್ ಖಾತೆಯನ್ನು 2 ವರ್ಷಗಳ ಕಾಲ ಬ್ಯಾನ್ ಮಾಡಿತ್ತು. ಇದರೊಂದಿಗೆ ಇನ್ಸ್ಟಾಗ್ರಾಂ ಖಾತೆಯನ್ನು ಬ್ಯಾನ್ ಮಾಡಿತ್ತು.
ಇದೀಗ ನಾವು ಮುಂದಿನ ಕೆಲ ದಿನಗಳಲ್ಲಿ ಟ್ರಂಪ್ ಅವರ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಖಾತೆಗಳನ್ನು ಮರುಸ್ಥಾಪಿಸಲು ಅವಕಾಶ ನೀಡುತ್ತಿದ್ದೇವೆ ಎಂದು ಮೆಟಾದ ಜಾಗತಿಕ ವ್ಯವಹಾರಗಳ ಅಧ್ಯಕ್ಷ ನಿಕ್ ಕ್ಲೆಗ್ ತಿಳಿಸಿದ್ದಾರೆ.
ಪುನರಾವರ್ತಿತ ಅಪರಾಧಗಳನ್ನು ತಡೆಯಲು ಹೊಸ ಮಾನದಂಡಗಳೊಂದಿಗೆ ಖಾತೆಯನ್ನು ಮರಸ್ಥಾಪಿಸಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿದ್ದಾರೆ.