ಅಮೆರಿಕಾ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಪ್ರವಾಸಿ ಮುಗಿಸಿ ಎರಡು ದಿನಗಳ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಅಮೆರಿಕಾದಲ್ಲಿ ಮೋದಿ ಅವರಿಗೆ ಭವ್ಯವಾದ ಸ್ವಾಗತ ದೊರಕಿದೆ.
ಅಮೆರಿಕದಿಂದ ಭಾರತೀಯರನ್ನು ವಾಪಸ್ ಕಳಿಸುವ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಹತ್ವ ಪಡೆದಿದೆ. ಆತಂಕದಲ್ಲಿರುವ ಭಾರತೀಯರು ಈ ಭೇಟಿಯಿಂದ ಗುಡ್‌ನ್ಯೂಸ್‌ನ ನಿರೀಕ್ಷೆಯಲ್ಲಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಭಾರತೀಯ ಕಾಲಮಾನ ಪ್ರಕಾರ ಶುಕ್ರವಾರ ನಸುಕಿನ ವೇಳೆ 3.30ಕ್ಕೆ ಪತ್ರಿಕಾಗೋಷ್ಠಿ ನಡೆಯಲಿದೆ.
ಅಮೆರಿಕಾದ ನಿಕಟಪೂರ್ವ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಮೋದಿ 2023ರಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು. ಅಂದಿನ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಮೋದಿ, ಭಾರತದಲ್ಲಿ ಧಾರ್ಮಿಕ ತಾರತಮ್ಯ ಇಲ್ಲ ಎಂದು ಹೇಳಿದ್ದರು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ನರೇಂದ್ರ ಮೋದಿ ಅವರು ಅಮೆರಿಕಾ ಭೇಟಿಯ ವೇಳೆ ಡೊನಾಲ್ಡ್ ಟ್ರಂಪ್ ಅವರೊಂದಿಗೆ ವ್ಯಾಪಾರ, ಇಂಧನ, ತಂತ್ರಜ್ಞಾನ ಮತ್ತು ವಲಸೆಯಂತಹ ವಿಚಾರಗಳ ಬಗ್ಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ಭೇಟಿಯು ಭಾರತ ಹಾಗೂ ಅಮೆರಿಕ ನಡುವಣ ದ್ವಿಪಕ್ಷೀಯ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುವ ನಿರೀಕ್ಷೆಯಿದೆ.