ಸಿಕ್ಕಿಂ ಗಡಿಯಲ್ಲಿ ಯುದ್ಧದ ವಾತಾವರಣ!

ಸೋಮವಾರ, 3 ಜುಲೈ 2017 (08:15 IST)
ನವದೆಹಲಿ: ಸಿಕ್ಕಿಂ ಗಡಿಯಲ್ಲಿ ಚೀನಾ ಪಡೆಗಳು ಪದೇ ಪದೇ ಖ್ಯಾತೆ ತೆಗೆಯುತ್ತಿರುವುದರಿಂದ ಕೆರಳಿರುವ ಭಾರತ ತನ್ನ ಯೋಧರನ್ನು ಯುದ್ಧ ಸನ್ನದ್ಧ ರೀತಿಯಲ್ಲಿ ಜಮಾವಣೆ ಮಾಡಿದೆ.

 
1962 ರ ನಂತರ ಈ ಗಡಿ ಭಾಗದಲ್ಲಿ ಭಾರತೀಯ ಸೈನಿಕರನ್ನು ಜಮಾವಣೆ ಮಾಡಿದ್ದು ಇದೇ ಮೊದಲಾಗಿದೆ. 55 ವರ್ಷಗಳ ಹಿಂದೆ ಈ ಗಡಿ ಭಾಗಕ್ಕಾಗಿ ಉಭಯ ದೇಶಗಳ ನಡುವೆ ಯುದ್ಧವೇ ನಡೆದಿತ್ತು. ಇದೀಗ ಮತ್ತೆ ಭಾರೀ ಸಂಖ್ಯೆಯಲ್ಲಿ ಇಲ್ಲಿ ಸೈನಿಕರ ಜಮಾವಣೆ ಮಾಡಲಾಗಿದೆ.

ಕಳೆದ ವಾರ ಚೀನಾ ಪಡೆಗಳು ಭಾರತೀಯ ಸೇನಾ ಬಂಕರ್ ನ್ನು ನಾಶ ಮಾಡಿದ ಮೇಲೆ ಗಡಿಯಲ್ಲಿ ಉದ್ವಿಗ್ನ ವಾತಾವರಣ ಹೆಚ್ಚಿದೆ. ಅಲ್ಲದೆ ಇತ್ತೀಚೆಗೆ ಒನ್ ರೋಡ್, ಒನ್ ಬೆಲ್ಟ್ ಎಂಬ ಚೀನಾದ ಯೋಜನೆಗೆ ಭಾರತ ಕೈಜೋಡಿಸದೇ ಇರುವುದು, ಚೀನಾ-ಪಾಕ್ ಆರ್ಥಿಕ ಕಾರಿಡಾರ್ ಗೆ ಭಾರತದ ನಕಾರಾತ್ಮಕ ಧೋರಣೆ ಆ ದೇಶವನ್ನು ಮತ್ತಷ್ಟು ಕೆರಳಿಸಿದೆ.

ಈ ಹಿನ್ನಲೆಯಲ್ಲಿ ಗಡಿಯಲ್ಲಿ ಮತ್ತಷ್ಟು ತಗಾದೆ ತೆಗೆಯುತ್ತಿದೆ. ಭಾರತ ಸೈನಿಕರನ್ನು ಜಮಾವಣೆ ಮಾಡಿದ ಬೆನ್ನಲ್ಲೇ ಚೀನಾ ಕೂಡಾ ಸಕಲ ಸನ್ನದ್ಧವಾಗಿದೆ ಎಂದು ಚೀನಾ ಮೂಲಗಳು ತಿಳಿಸಿವೆ. ಅಲ್ಲದೆ, ಭಾರತ ಮೊದಲು ತನ್ನ ಸೈನಿಕರನ್ನು ಹಿಂಪಡೆಯಲಿ. ಇಲ್ಲದಿದ್ದರೆ, ಉಭಯ ದೇಶಗಳ ಸಂಬಂಧ ಮತ್ತಷ್ಟು ಹದಗೆಡಬಹುದು ಎಂದು ಚೀನಾ ಎಚ್ಚರಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ