ಮಂಗಳೂರು: ಕಾಸರಗೋಡಿನಿಂದ ಪುತ್ತೂರಿಗೆ ಸಂಪರ್ಕ ಕಲ್ಪಿಸುವ ಸಾರಡ್ಕ ಚೆಕ್ ಪೋಸ್ಟ್ ಬಳಿ ರಾತ್ರಿ ವೇಳೆ ಸಂಚರಿಸುವಾಗ ವಾಹನ ಸವಾರರು ಎಚ್ಚರವಾಗಿರಬೇಕು. ಯಾಕೆಂದರೆ ಈ ರಸ್ತೆಯಲ್ಲಿ ರಾತ್ರಿ ವೇಳೆ ದರೋಡೆ ಗ್ಯಾಂಗ್ ಸಕ್ರಿಯವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಕುರಿತ ವಿಡಿಯೋ ಒಂದು ಈಗ ವೈರಲ್ ಆಗಿದೆ.
ಕೇರಳ-ಕರ್ನಾಟಕ ರಾಜ್ಯಗಳ ಗಡಿ ಭಾಗವಾದ ಸಾರಡ್ಕ ಗೇಟ್ ನಿಂದ ಕೆಲವೇ ಹೆಜ್ಜೆ ದೂರದಲ್ಲಿ ಗುಂಪೊಂದು ಹೆದ್ದಾರಿಯಲ್ಲಿ ಸಹಾಯ ಕೇಳುವ ನೆಪದಲ್ಲಿ ವಾಹನಗಳನ್ನು ತಡೆದು ದರೋಡೆ ಮಾಡಲೆತ್ನಿಸಿದೆ. ಪ್ರತ್ಯಕ್ಷದರ್ಶಿಯೊಬ್ಬರು ಈ ಕುರಿತು ವಿಡಿಯೋ ಸಮೇತ ಸೋಷಿಯಲ್ ಮೀಡಿಯಾದಲ್ಲಿ ಜನರಿಗೆ ಎಚ್ಚರಿಸುವ ಕೆಲಸ ಮಾಡಿದ್ದಾರೆ.
ಜೂನ್ 14 ರಂದು ತಮಗೆ ಈ ಅನುಭವ ಆಗಿದೆ ಎಂದು ಅವರು ಹಂಚಿಕೊಂಡಿದ್ದಾರೆ. ರಾತ್ರಿ ಸುಮಾರು 10 ಗಂಟೆ ವೇಳೆಗೆ ಈ ರಸ್ತೆಯಲ್ಲಿ ಕಾರ್ ಮೂಲಕ ತೆರಳುವಾಗ ಕೆಲವು ಯುವಕರ ಗುಂಪು ಇತ್ತು. ಈ ಪೈಕಿ ಒಬ್ಬಾತ ಬಿದ್ದವನಂತೆ ನಟಿಸುತ್ತಿದ್ದ. ಮತ್ತೊಬ್ಬರು ಕಾರು ನಿಲ್ಲಿಸುವಂತೆ ಸನ್ನೆ ಮಾಡುತ್ತಿದ್ದಾರೆ. ಆದರೆ ಇವರ ಬಗ್ಗೆ ಅನುಮಾನಗೊಂಡು ಆ ವ್ಯಕ್ತಿ ಕಾರು ನಿಲ್ಲಿಸದೇ ಮುಂದೆ ನಡೆದಿದ್ದಾರೆ. ಆದರೆ ಮತ್ತೆ ಕಾರ್ ನ ಡ್ಯಾಶ್ ಬೋರ್ಡ್ ಕ್ಯಾಮರಾದಲ್ಲಿ ನೋಡಿದಾಗ ಬಿದ್ದವನಂತೆ ನಟಿಸುತ್ತಿದ್ದವನು ಎದ್ದು ನಿಂತಿದ್ದು ಇದು ದುಷ್ಕೃತ್ಯ ನಡೆಸಲೆಂದೇ ಮಾಡುತ್ತಿರುವ ಸಂಚು ಎಂದು ಮನದಟ್ಟಾಗಿದೆ.
ಇದೇ ರೀತಿ ಅನುಭವ ತಮಗೂ ಆಗಿದೆ ಎಂದು ಮತ್ತೆ ಕೆಲವರೂ ಹಂಚಿಕೊಂಡಿದ್ದಾರೆ. ಹೀಗಾಗಿ ಈ ರಸ್ತೆಯಲ್ಲಿ ದರೋಡೆಕೋರರ ಗುಂಪು ಆಕ್ಟಿವ್ ಆಗಿದೆಯೇನೋ ಎಂಬ ಸಂಶಯ ಮೂಡಿದೆ. ಈ ಬಗ್ಗೆ ಈಗ ಪೊಲೀಸರು ಸೂಕ್ತ ತನಿಖೆ ನಡೆಸಿ ಸಾರ್ವಜನಿಕರ ಆತಂಕ ನಿವಾರಸಿಬೇಕಿದೆ.