ಮುಗಿಯಿತು ಚೆನ್ನೈ ಸೂಪರ್ ಕಿಂಗ್ಸ್ ಅಜ್ಞಾತವಾಸ! ಯಾರೆಲ್ಲಾ ಇರ್ತಾರೆ ತಂಡದಲ್ಲಿ?
ಶುಕ್ರವಾರ, 14 ಜುಲೈ 2017 (11:53 IST)
ಚೆನ್ನೈ: ಮ್ಯಾಚ್ ಫಿಕ್ಸಿಂಗ್ ಕಳಂಕದಿಂದಾಗಿ ಎರಡು ವರ್ಷ ಐಪಿಎಲ್ ನಿಂದ ನಿಷೇಧಕ್ಕೊಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತೆ ಚಟುವಟಿಕೆಗೆ ಮರಳಿದೆ. ಎರಡು ವರ್ಷಗಳ ನಿಷೇಧ ಅವಧಿ ಮುಗಿದಿದ್ದು, ಮತ್ತೆ ತಂಡ ಕಟ್ಟಲು ಸಿಎಸ್ ಕೆ ತಂಡ ಅಣಿಯಾಗಿದೆ.
ತಂಡದ ಮೊದಲ ಉದ್ದೇಶವೇ ತಮ್ಮ ಕಿಂಗ್ ಧೋನಿಯನ್ನು ಮತ್ತೆ ವಾಪಸ್ ಕರೆಸಿಕೊಳ್ಳುವುದು. ಅದಕ್ಕಾಗಿ ಸಕಲ ಪ್ರಯತ್ನದಲ್ಲಿದೆ. ಧೋನಿ ಚೆನ್ನೈ ತಂಡಕ್ಕೆ ಮೂರು ಬಾರಿ ಐಪಿಎಲ್ ಕಿರೀಟ ಗೆದ್ದುಕೊಟ್ಟ ನಾಯಕ. ಆದರೆ ಧೋನಿ ಜತೆಗಿನ ಇನ್ನೂ ಮಾತುಕತೆ ನಡೆಸಿಲ್ಲ ಎಂದು ಸಿಎಸ್ ಕೆ ಹೇಳಿಕೊಂಡಿದೆ.
ಧೋನಿ ಮಾತ್ರವಲ್ಲದೆ, 2015 ರಲ್ಲಿ ತಮ್ಮ ತಂಡದಲ್ಲಿದ್ದ ಸಹಾಯಕ ಸಿಬ್ಬಂದಿಗಳನ್ನೂ ಮರಳಿ ಕರೆಸಿಕೊಳ್ಳಲು ಚೆನ್ನೈ ಯೋಜನೆ ರೂಪಿಸಿದೆ. ಆಟಗಾರರು, ಸಹಾಯಕ ಸಿಬ್ಬಂದಿಗಳು ಮಾತ್ರವಲ್ಲ, ಅಭಿಮಾನಿಗಳನ್ನೂ ಮತ್ತೆ ತಮ್ಮತ್ತ ಸೆಳೆಯಲು ಎಲ್ಲಾ ಯೋಜನೆ ರೂಪಿಸಿದೆ.
ಸಾಮಾಜಿಕ ಜಾಲತಾಣವನ್ನು ಮತ್ತೆ ಕ್ರಿಯಾಶೀಲಗೊಳಿಸಿದ್ದು, ಸದ್ಯದಲ್ಲೇ ಅಭಿಮಾನಿಗಳಿಗೆ ಸಿಎಸ್ ಕೆ ಜೆರ್ಸಿ ತೊಟ್ಟು ಸೆಲ್ಫೀ ಕಳುಹಿಸಿಕೊಡಲು ಸೂಚನೆ ನೀಡಲಿದೆಯಂತೆ. ಹಳೆಯ ಸಿಎಸ್ ಕೆ ಆಟಗಾರರೆಲ್ಲರೂ ಒಟ್ಟುಗೂಡುತ್ತಿದ್ದಾರೆಂದ ಮೇಲೆ ಅಭಿಮಾನಿಗಳೂ ಬರಲೇ ಬೇಕಲ್ಲಾ?