ದೇಶಕ್ಕಾಗಿ ಐಪಿಎಲ್ ನಂಟಿಗೆ ಗುಡ್ ಬೈ ಹೇಳಲಿದ್ದಾರೆಯೇ ರಾಹುಲ್ ದ್ರಾವಿಡ್?

ಮಂಗಳವಾರ, 27 ಜೂನ್ 2017 (11:58 IST)
ಮುಂಬೈ: ಭಾರತದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅಂಡರ್ 19 ತಂಡ ಮತ್ತು ಐಪಿಎಲ್ ನ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಇದೀಗ ಬಂದ ವರದಿಯ ಪ್ರಕಾರ ಐಪಿಎಲ್ ನಂಟನ್ನು ದ್ರಾವಿಡ್ ಬಿಡಲಿದ್ದಾರೆ ಎಂಬ ಅನುಮಾನಗಳು ಮೂಡಿವೆ.

 
ಭಾರತ ಎ ತಂಡದ ಕೋಚ್ ಆಗಿ 10 ತಿಂಗಳು ಕಾರ್ಯ ನಿರ್ವಹಿಸುವ ದ್ರಾವಿಡ್ ಉಳಿದ 2 ತಿಂಗಳು ಐಪಿಎಲ್ ತಂಡಕ್ಕಾಗಿ ಕೆಲಸ ಮಾಡುತ್ತಾರೆ. ಆದರೆ ಇದು ಲಾಭದಾಯಕ ಹುದ್ದೆ ಎಂದು ಇತ್ತೀಚೆಗಷ್ಟೇ ಬಿಸಿಸಿಐಗೆ ರಾಜೀನಾಮೆ ನೀಡಿದ ಆಡಳಿತ ಮಂಡಳಿ ಸದಸ್ಯ ರಾಮಚಂದ್ರ ಗುಹಾ ಆರೋಪಿಸಿದ್ದರು.

ನಂತರ ಬಿಸಿಸಿಐ ದ್ರಾವಿಡ್ ಗೆ ಕ್ಲೀನ್ ಚಿಟ್ ನೀಡಿದೆ. ಇದೀಗ ದ್ರಾವಿಡ್ ರನ್ನು ಮತ್ತೆ ಭಾರತ ಎ ತಂಡದ ಕೋಚ್ ಆಗಿ 12 ತಿಂಗಳ ಪರಿಷ್ಕೃತ ಗುತ್ತಿಗೆ ನೀಡಲು ಬಿಸಿಸಿಐ ಚಿಂತನೆ ನಡೆಸಿದೆ. ಇದಕ್ಕೆ ದ್ರಾವಿಡ್ ಕೂಡಾ ಒಪ್ಪಿದ್ದಾರೆಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ಹಾಗಾದಲ್ಲಿ ದ್ರಾವಿಡ್ ಐಪಿಎಲ್ ಜವಾಬ್ದಾರಿಯಿಂದ ಮುಕ್ತರಾಗಬೇಕಿದೆ. ದ್ರಾವಿಡ್ ಬಿಸಿಸಿಐ ಜತೆಗಿನ 10 ತಿಂಗಳ ಗುತ್ತಿಗೆಯಿಂದ 4 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರು. ಐಪಿಎಲ್ ನಲ್ಲೂ ಎರಡು ತಿಂಗಳ ಕೋಚಿಂಗ್ ಕೆಲಸಕ್ಕೆ ಅಷ್ಟೇ ಸಂಭಾವನೆ ಪಡೆಯುತ್ತಾರೆ. ಆದರೂ ರಾಷ್ಟ್ರೀಯ ತಂಡಕ್ಕಾಗಿ ಐಪಿಎಲ್ ಬಿಡಲು ಸಿದ್ಧರಾಗಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ