ಕೆಎಲ್ ರಾಹುಲ್-ಮಯಾಂಕ್ ನಡುವೆ ಆರೆಂಜ್ ಕ್ಯಾಪ್ ಸಂಗೀತ ಕುರ್ಚಿಯಾಟ
ಸೋಮವಾರ, 5 ಅಕ್ಟೋಬರ್ 2020 (12:10 IST)
ದುಬೈ: ಈ ಬಾರಿಯ ಐಪಿಎಲ್ ನಲ್ಲಿ ಕನ್ನಡಗಿರದ್ದೇ ಕಾರುಬಾರು ಎಂದರೆ ತಪ್ಪಾಗಲಾರದು. ಬ್ಯಾಟ್ಸ್ ಮನ್ ಗಳ ಪೈಕಿ ಗಮನ ಸೆಳೆಯುತ್ತಿರುವವರು ಬಹುತೇಕ ಕನ್ನಡಿಗರೇ.
ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ದೇವದತ್ತ್ ಪಡಿಕ್ಕಲ್ ಅಗ್ರ ರನ್ ಗಳಿಕೆದಾರರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಅದರಲ್ಲೂ ವಿಶೇಷವಾಗಿ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಮತ್ತು ಗೆಳೆಯ ಮಯಾಂಕ್ ನಡುವೆ ಆರೆಂಜ್ ಕ್ಯಾಪ್ ಗೌರವ ಸಂಗೀತ ಕುರ್ಚಿಯಾಡುತ್ತಿದೆ. ಕಳೆದ ಪಂದ್ಯದಲ್ಲಿ ಆರೆಂಜ್ ಕ್ಯಾಪ್ ಗೌರವ ಪಡೆದಿದ್ದ ಮಯಾಂಕ್ ರಿಂದ ನಿನ್ನೆಯ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಕೆಎಲ್ ರಾಹುಲ್ ಕ್ಯಾಪ್ ಗೌರವ ತಮ್ಮದಾಗಿಸಿಕೊಂಡಿದ್ದರು. ಇದೀಗ ಐಪಿಎಲ್ 13 ರ ಗರಿಷ್ಠ ರನ್ ಸರದಾರ ಸ್ಥಾನ ರಾಹುಲ್ ಹೊಂದಿದ್ದಾರೆ. ರಾಹುಲ್ ರನ್ ಗಳಿಕೆ ಈಗ 302 ಕ್ಕೆ ತಲುಪಿದೆ. ನಿನ್ನೆಯ ಪಂದ್ಯದ ಪ್ರದರ್ಶನದ ಬಳಿಕ ಚೆನ್ನೈ ಆಟಗಾರ ಫಾ ಡು ಪ್ಲೆಸಿಸ್ 282 ರನ್ ಗಳೊಂದಿಗೆ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಮಯಾಂಕ್ 272 ರನ್ ಗಳೊಂದಿಗೆ ತೃತೀಯ ಸ್ಥಾನಕ್ಕೇರಿದ್ದಾರೆ. ವಿಪರ್ಯಾಸವೆಂದರೆ ಪಂಜಾಬ್ ತಂಡದಲ್ಲೇ ಅತ್ಯಧಿಕ ರನ್ ಗಳಿಸುವ ಬ್ಯಾಟ್ಸ್ ಮನ್ ಗಳಿದ್ದರೂ ತಂಡ ಮಾತ್ರ ಗೆಲ್ಲುತ್ತಿಲ್ಲ.