ಮನರಂಜನೆಯಲ್ಲಿ ತೋಯಿಸಿದ ಐಪಿಎಲ್-2ಕ್ಕೆ ತೆರೆ

ಸೋಮವಾರ, 25 ಮೇ 2009 (17:27 IST)
PTI
ಝಗಮಗಿಸುವ ವಿದ್ಯುದ್ದೀಪಗಳ ಅಲಂಕಾರ, ಕಿವಿಗಪ್ಪಳಿಸುವ ಸಂಗೀತ ಝೇಂಕಾರ, ಮನರಂಜನೆಯ ಮಹಾಪೂರವೇ ಹರಿಸುವ ಮೂಲಕ ಐಪಿಎಲ್‌-2ಕ್ಕೆ ದಕ್ಷಿಣ ಆಫ್ರಿಕಾದಲ್ಲಿ ತೆರೆಬಿದ್ದಿದೆ. ಭಾನುವಾರ ರಾತ್ರಿ ಡೆಕ್ಕನ್ ಚಾರ್ಜರ್ಸ್ ಚಾಂಪಿಯನ್ ವಿಜಮಾಲೆ ಸ್ವೀಕರಿಸಿದ ನಂತರ ನಡೆದ ಭಾರೀ ಮನರಂಜನಾ ಕಾರ್ಯಕ್ರಮ ಕ್ರಿಕೆಟ್ ಲೋಕದಲ್ಲಿ ಗ್ಲ್ಯಾಮರ್ ಬೆಳಕಿನಿಂದ ತೋಯಿಸಿತು.

ದಕ್ಷಿಣ ಆಫ್ರಿಕಾದ ಮೈದಾನ ಅಕ್ಷರಶಃ ಸ್ಟಾರ್‌ಗಳಿಂದ ಕಂಗೊಳಿಸಿತು. ಬಾಲಿವುಡ್, ಕೆರೇಬಿಯನ್ ಹಾಗೂ ಅಮೆರಿಕನ್ ತಾರೆಯರ ಮಹಾಪೂರವೇ ಮೈದಾನಕ್ಕಿಳಿಯುವ ಜತೆಗೆ ನೆರೆದಿದ್ದ ಭಾರೀ ಕ್ರಿಕೆಟ್ ಪ್ರೇಮಿಗಳಲ್ಲಿ ಮನರಂಜನೆಯ ಸಂಚಲನ ಮೂಡಿಸಿದರು.

ಬಾಲಿವುಡ್ ತಾರೆಯರೂ ಪಾಲ್ಗೊಂಡು ಕಾರ್ಯಕ್ರಮ ನೀಡಿದರೂ, ಈ ಮೊದಲೇ ನಿಗದಿಯಾದ ಶಿಲ್ಪಾ ಶೆಟ್ಟಿ ಹಾಗೂ ಅಮೆರಿಕನ್ ರ್ಯಾಪ್ ಸಿಂಗರ್ ಅಕೋನ್ ಜತೆಗೆ ನೀಡಬೇಕಾದ ಕಾರ್ಯಕ್ರಮ ಮಾತ್ರ ಯಾವುದೇ ಕಾರಣ ನೀಡದೆ ರದ್ದಾಯಿತು. ಆದರೆ, ಬಾಲಿವುಡ್ ಹಾಟ್ ಬೆಡಗಿ ಕತ್ರಿನಾ ಕೈಫ್, ಸಿಂಗರ್ ಎಡ್ಡೀ ಗ್ರ್ಯಾಂಟ್ ಜತೆಗೆ ನೀಡಿದ ಕಾರ್ಯಕ್ರಮ ಪ್ರಶಂಸೆಗೆ ಪಾತ್ರವಾಯಿತು.

ಐಪಿಎಲ್ ಸಮಾರೋಪ ಸಮಾಪರಂಭದ ಸಂದರ್ಭ ಮಾತನಾಡಿದ ಕ್ರಿಕೆಟ್ ದಕ್ಷಿಣ ಆಫ್ರಿಕಾ(ಸಿಎಸ್ಎ)ದ ಅಧ್ಯಕ್ಷ ಗೆರಾಲ್ಡ್ ಮಜೋಲಾ, ಐಪಿಎಲ್ ಭರ್ಜರಿ ಯಶಸ್ಸು ಕಂಡಿದ್ದು, ಇಂತಹ ಮ್ಯಾಚ್‌ಗಳನ್ನು ನಡೆಸುವ ಮೂಲಕ ಕ್ರಿಕೆಟ್‍ನಲ್ಲಿ ಜಾಗತೀಕರಣ ವೃದ್ಧಿಯಾಗುತ್ತದೆ ಎಂದರು.
ಅತ್ಯಂತ ಕಡಿಮೆ ಸಮಯದಲ್ಲಿ ಅದ್ಭುತವಾದ ಪಂದ್ಯಾವಳಿಯನ್ನು ನಡೆಸಲು ಸಾಧ್ಯವಾದುದಕ್ಕೆ ಹಾಗೂ ಭಾರತ ತನ್ನ ಸಿಎಸ್‌ಎ ಮೇಲೆ ನಂಬಿಕೆ ಇರಿಸಿದ್ದಕ್ಕೆ ಗೆರಾಲ್ಡ್ ಧನ್ಯವಾದ ಅರ್ಪಿಸಿದರು.

ಇದೊಂದು ಅತ್ಯುತ್ತಮ ಕಾನ್ಸೆಪ್ಟ್ ಆಗಿದ್ದು, ವಿಶ್ವದ ಕ್ರಿಕೆಟ್ ಜಗತ್ತಿನ ಶೈಲಿಯನ್ನೇ ಬದಲಾಯಿಸಿಬಿಟ್ಟಿದೆ. ಈ ಐಪಿಎಲ್‌ಗೆ ಇನ್ನಷ್ಟು ನೀರೆರೆದರೆ, ಇದೊಂದು ವಿಶ್ವದ ಅದ್ಭುತ ಪಂದ್ಯಾವಳಿಯಾಗುವುದಲ್ಲದೆ, ಜಾಗತೀಕರಣಕ್ಕೆ ಅಭೂತಪೂರ್ವ ಕೊಡುಗೆ ನೀಡಲಿದೆ ಎಂದೂ ಗೆರಾಲ್ಡ್ ಭವಿಷ್ಯ ನುಡಿದರು.

ದಕ್ಷಿಣ ಆಫ್ರಿಕಾ ಅಧ್ಯಕ್ಷ ಜಾಕೋಬ್ ಝೂಮಾ ಭಾರತ ತನ್ನ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾದ ಮೇಲೆ ನಂಬಿಕೆಯಿಟ್ಟು ಐಪಿಎಲ್ ನಡೆಸಲು ತಮ್ಮ ದೇಶವನ್ನು ಆಯ್ಕೆ ಮಾಡಿದ್ದಕ್ಕೆ ಧನ್ಯವಾದ ಅರ್ಪಿಸಿದರು. ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ದಕ್ಷಿಣ ಆಫ್ರಿಕಾ ನೀಡಿದ ಅಮೋಘ ಸಹಕಾರಕ್ಕೆ ಕೃತಜ್ಞತೆ ಹೇಳಿದರು.

ವೆಬ್ದುನಿಯಾವನ್ನು ಓದಿ