ಆರ್‌ಸಿಬಿ ವಿರುದ್ಧ ರೋಚಕ ಗೆಲುವು: ಫೈನಲ್‌ಗೆ ಪ್ರವೇಶಿಸಿದ ಚೆನ್ನೈ ಸೂಪರ್ ಕಿಂಗ್ಸ್

ಶನಿವಾರ, 23 ಮೇ 2015 (10:23 IST)
ಚೆನ್ನೈ ಸೂಪರ್ ಕಿಂಗ್ಸ್ ಶುಕ್ರವಾರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ರೋಚಕವಾಗಿ ಸೋಲಿಸುವ ಮೂಲಕ ಐಪಿಎಲ್ ಪಂದ್ಯಾವಳಿಯ ಫೈನಲ್‌ಗೆ ಪ್ರವೇಶಿಸಿದೆ. 8 ಆವೃತ್ತಿಗಳ ಐಪಿಎಲ್‌ನಲ್ಲಿ ದಾಖಲೆಯ 6 ಬಾರಿ ಫೈನಲ್ ಪ್ರವೇಶಿಸಿದ ಹೆಗ್ಗಳಿಕೆಗೆ ಚೆನ್ನೈ ಪಾತ್ರವಾಗಿದೆ.  ಆಟದ ಎಲ್ಲಾ ವಿಭಾಗದಲ್ಲಿ ಪ್ರಭುತ್ವ ಸಾಧಿಸಿದ ಚೆನ್ನೈ 3 ವಿಕೆಟ್ ರೋಚಕ ಗೆಲುವು ಗಳಿಸುವ ಮೂಲಕ ಆರ್‌ಸಿಬಿ ಫೈನಲ್ ಕನಸು ಭಗ್ನಗೊಂಡಿತು. 
 
 ಮೈಕ್ ಹಸ್ಸಿ ಅವರ 46 ಎಸೆತಗಳಲ್ಲಿ 56 ರನ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಅಲ್ಪ ಮೊತ್ತವನ್ನು ಬೆನ್ನತ್ತಿದ ಚೆನ್ನೈ ಕೊನೆಯ ಓವರಿನಲ್ಲಿ ಆರ್‌ಸಿಬಿ ಸ್ಕೋರಿನ ಗುರಿ ಮುಟ್ಟಿ ಜಯಗಳಿಸಿತು.  ಮೈಕೇಲ್ ಹಸ್ಸಿ ತನ್ನ ವ್ಯಾಪಕ ಅನುಭವದಿಂದ ಸಿಎಸ್‌ಕೆ ಇನ್ನಿಂಗ್ಸ್ ಮುನ್ನಡೆಸಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದರು. 
 ಸಿಎಸ್‌ಕೆ ಈಗ ಕೋಲ್ಕತಾದಲ್ಲಿ ನಡೆಯುವ ಫೈನಲ್ಸ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಭಾನುವಾರ ಎದುರಿಸಲಿದೆ.

ಇದಕ್ಕೆ ಮುಂಚೆ ಎಡಗೈ  ವೇಗಿ ಆಶಿಶ್ ನೆಹ್ರಾ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ ಆರ್‌ಸಿಬಿಯನ್ನು 8 ವಿಕೆಟ್‌ಗೆ 139 ರನ್‌ಗೆ ನಿಯಂತ್ರಿಸಿದರು. ನೆಹ್ರಾ 28 ರನ್ ನೀಡಿ 3 ನಿರ್ಣಾಯಕ ವಿಕೆಟ್‌ಗಳನ್ನು ಕಬಳಿಸಿ  ಆರ್‌ಸಿಬಿ ಇನ್ನಿಂಗ್ಸ್ ಹಳಿತಪ್ಪಿಸಿದರು. ಅವರಿಗೆ ರವಿಚಂದ್ರನ್ ಅಶ್ವಿನ್(1/13), ಮೋಹಿತ್ ಶರ್ಮಾ(1/22), ಬ್ರಾವೋ(1/22) ಮತ್ತು ಸುರೇಶ್ ರೈನಾ(1/36) ಸಾಥ್ ನೀಡಿದರು.
 
ಕ್ರಿಸ್ ಗೇಲ್ ಆರ್‌ಸಿಬಿ ಪರ ಟಾಪ್ ಸ್ಕೋರ್ ಮಾಡಿ 43 ಎಸೆತಗಳಲ್ಲಿ 41 ರನ್ ಸಿಡಿಸಿದರು. ಅವರ ಸ್ಕೋರಿನಲ್ಲಿ ಮೂರು ಸಿಕ್ಸರ್‌ಗಳು ಮತ್ತು ನಾಲ್ಕು ಬೌಂಡರಿಗಳಿದ್ದವು. ಯುವ ಆಟಗಾರ ಸರ್‌ಫ್ರಾಜ್ ಖಾನ್(21 ಎಸೆತಗಳಲ್ಲಿ 31) ಕೊನೆಯಲ್ಲಿ ಬಿರುಸಿನ ರನ್ ಹೊಡೆದು ಸ್ಕೋರ್ ಮೊತ್ತವನ್ನು ಏರಿಸಿದರು. ದಿನೇಶ್ ಕಾರ್ತಿಕ್ 26 ಎಸೆತಗಳಲ್ಲಿ 28 ರನ್ ಬಾರಿಸಿದರು. ಆರ್‌ಸಿಬಿಯ ಸಾಧಾರಣ ಮೊತ್ತ ಬೆನ್ನತ್ತಿದ ಸಿಎಸ್‌ಕೆ ಪರ ಡ್ವೇನ್ ಸ್ಮಿತ್ 11 ಎಸೆತಗಳಲ್ಲಿ ಬಿರುಸಿನ 17 ರನ್ ಬಾರಿಸಿದರು.
 
 ಅವರು ಅಪಾಯಕಾರಿಯಾಗಿ ಕಂಡುಬರುತ್ತಿದ್ದಂತೆ, ಶ್ರೀನಾಥ್ ಅರವಿಂದ್ ಬೌಲಿಂಗ್‌ನಲ್ಲಿ ಸ್ಟಾರ್ಕ್‌ಗೆ ಕ್ಯಾಚಿತ್ತು ಔಟಾದರು. ಮರು ಎಸೆತದಲ್ಲೇ ಪ್ಲೆಸಿಸ್ ಕ್ಯಾಚ್ ಹಿಡಿಯಲು ಗೇಲ್ ವಿಫಲರಾಗಿದ್ದರಿಂದ ಅರವಿಂದ್‌ಗೆ ಇನ್ನೊಂದು ವಿಕೆಟ್ ಸಿಗುವ ಅವಕಾಶ ಕೈತಪ್ಪಿತು.  ಪ್ಲೆಸಿಸ್ ಬಳಿಕ ವೈಸ್ ಬೌಲಿಂಗ್‌ನಲ್ಲಿ ಹಸ್ಸಿ ಬ್ಯಾಟಿನ ತುದಿಗೆ ತಾಗಿದ ಚೆಂಡನ್ನು ದಿನೇಶ್ ಕಾರ್ತಿಕ್ ಹಿಡಿಯಲು ವಿಫಲರಾಗಿ ಜೀವದಾನ ಸಿಕ್ಕಿತು. ಸಿಎಸ್‌ಕೆಯನ್ನು ನಿಯಂತ್ರಣದಲ್ಲಿರಿಸಲು ಆರ್‌ಸಿಬಿ ಬೌಲರ್‍‌ಗಳು ಬಿಗಿಯಾದ ಲೈನ್ ಮತ್ತು ಲೆಂಗ್ತ್ ಬೌಲಿಂಗ್ ಮಾಡಿದರು. 
 
ಸಿಎಸ್‌ಕೆಗೆ 30 ಎಸೆತಗಳಲ್ಲಿ 49 ರನ್ ಅಗತ್ಯವಿದ್ದು, ಹಸ್ಸಿ ಚಾಹಲ್ ಬೌಲಿಂಗ್‌ನಲ್ಲಿ ಎರಡು ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಚೊಚ್ಚಲ ಅರ್ಧಶತಕ ಸಿಡಿಸಿದರು. 
 ಆದರೆ ಅರ್ಧಶತಕ ಸಿಡಿಸಿದ ಸ್ವಲ್ಪ ಹೊತ್ತಿನಲ್ಲೇ ವೈಸ್ ಬೌಲಿಂಗ್‌ನಲ್ಲಿ ಹರ್ಷಲ್ ಪಟೇಲ್‍‌ಗೆ ಕ್ಯಾಚಿತ್ತು ಔಟಾದರು. 19ನೇ ಓವರಿನಲ್ಲಿ ನೇಗಿ ಮತ್ತು ಬ್ರೇವೋ ಔಟಾದರು. ನೇಗಿ ರನೌಟ್ ಆಗಿದ್ದರೆ, ಸ್ಟಾರ್ಕ್ ಸೊನ್ನೆಗೆ ಔಟಾದರು. ಗೆಲುವಿಗೆ ಒಂದು ರನ್ ಬಾಕಿವುಳಿದಿದ್ದಾಗ, ಧೋನಿ ಬ್ಯಾಟಿನ ತುದಿಗೆ ಚೆಂಡು ತಾಗಿ ಕಾರ್ತಿಕ್ ಕ್ಯಾಚಿತ್ತು ಔಟಾದರು.

 ಮುಂದಿನ ಎಸೆತದಲ್ಲಿ ಅಶ್ವಿನ್ ಒಂದು ರನ್ ಬಾರಿಸಿ ಚೆನ್ನೈಗೆ ವಿಜಯ ತಂದಿತ್ತರು. ಚೆನ್ನೈ ಭಾನುವಾರ ಫೈನಲ್ಸ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದ್ದು, ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ಪ್ರಯತ್ನ ಮಾಡಲಿದೆ. 

 

ವೆಬ್ದುನಿಯಾವನ್ನು ಓದಿ