ಸಿಎಸ್‌ಕೆ ವಿರುದ್ಧ ಪಂದ್ಯ: ಸತತ 3 ಸೋಲಿನಿಂದ ಮುಂಬೈಗೆ ಹೆಚ್ಚಿದ ಒತ್ತಡ

ಶುಕ್ರವಾರ, 17 ಏಪ್ರಿಲ್ 2015 (14:45 IST)
ಸತತ ಮೂರು ಸೋಲುಗಳ ಮೂಲಕ ಐಪಿಎಲ್ 2015 ಸರಣಿಯನ್ನು ಕಳಪೆಯಾಗಿ ಆರಂಭಿಸಿರುವ ಮುಂಬೈ ಇಂಡಿಯನ್ಸ್ ತಂಡ ಎರಡು ಬಾರಿಯ ಪ್ರಶಸ್ತಿ ವಿಜೇತರು ಮತ್ತು ಫಾರಂನಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಶುಕ್ರವಾರ ಆಡಲಿದೆ. ಎಲ್ಲಾ ಪಂದ್ಯಗಳಲ್ಲಿ ಸೋತು ಪ್ರಸಕ್ತ 8ನೇ ಆವೃತ್ತಿಯಲ್ಲಿ ಒಂದೂ ಪಾಯಿಂಟ್ ಗಳಿಸದಿರುವ ಮುಂಬೈ ತಂಡ ಸಾಕಷ್ಟು ಒತ್ತಡಕ್ಕೆ ಒಳಗಾಗಿದೆ. 
 
ಕೊಲ್ಕತ್ತಾ ನೈಟ್ ರೈಡರ್ಸ್, ಕಿಂಗ್ಸ್ ಇಲೆವನ್ ಪಂಜಾಬ್ ಮತ್ತು ರಾಜಸ್ಥಾನ ರಾಯಲ್ಸ್ ವಿರುದ್ಧ ಒಂದರ ಹಿಂದೊಂದು ಸೋಲುಗಳ ನಂತರ ಮುಂಬೈ ಇಂಡಿಯನ್ಸ್ ಚೇತರಿಸಿಕೊಳ್ಳಲು ಹಪಹಪಿಸುತ್ತಿದೆ. ಆದರೆ ರೌಂಡ್ ರಾಬಿನ್ ಹಂತ ಇನ್ನೂ ಶೈಶವಾವಸ್ಥೆಯಲ್ಲಿದ್ದು,  ಐಪಿಎಲ್-7ರಲ್ಲಿ ಸತತ ಐದು ಪಂದ್ಯಗಳನ್ನು ಸೋತು ನಂತರ ಪುಟಿದೆದ್ದ ಮುಂಬೈನಲ್ಲಿ ಹೋರಾಡುವ ಛಲ ಕುಂದಿಲ್ಲ.  
ನಾಯಕ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ರಿಲಯನ್ಸ್ ಪ್ರತಿಷ್ಠಾನ ಸಮಾರಂಭದ ನೇಪಥ್ಯದಲ್ಲಿ ಮಾತನಾಡುತ್ತಾ, ನಮ್ಮ ಸಿದ್ಧತೆ ಚೆನ್ನಾಗಿದೆ. ಆದರೆ ಯೋಜನೆಯನ್ನು ಪೂರ್ಣವಾಗಿ ಕಾರ್ಯಗತಗೊಳಿಸಲು ವಿಫಲರಾಗಿದ್ದೇವೆ. ಕಳೆದ ಬಾರಿ ಕೂಡ ಇದೇ ರೀತಿಯ ಸ್ಥಿತಿಯಲ್ಲಿದ್ದೆವು ಎಂದು ನೆನಪಿಸಿದ್ದಾರೆ. 
ಸತತವಾಗಿ ಮೂರು ಸೋಲು ಎಂತಹ ತಂಡವಾದರೂ ಆತ್ಮಸ್ಥೈರ್ಯ ಕುಂದಿಸುತ್ತದೆ. ಈ ಸೋಲುಗಳ ನಡುವೆ ತವರುನೆಲದಲ್ಲಿ ಚೇತರಿಸಿಕೊಂಡಿರುವ  ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಬೇಕಾಗಿದೆ. 
 ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸುವುದು ಕಷ್ಟವಾದರೂ, ಟಾಪ್ ಟೀಮ್‌ಗಳ ವಿರುದ್ಧ ಮುಂಬೈ ಜಯಗಳಿಸಿರುವುದನ್ನು ಇತಿಹಾಸ ಸಾಬೀತು ಮಾಡಿದೆ. ಮುಂಬೈನ ಮೇಲಿನ ಕ್ರಮಾಂಕದ ಆಟಗಾರರ ಶೋಚನೀಯ ಪ್ರದರ್ಶನ ಕಂಗೆಡಿಸಿದ್ದರೂ ತವರು ಅಭಿಮಾನಿಗಳ ನಡುವೆ ಆಡುವುದು ಹೆಚ್ಚಿನ ಅನುಕೂಲ ಒದಗಿಸಿದೆ. 
 
ತವರು ತಂಡಕ್ಕೆ ಹೋಲಿಸಿದರೆ, ಚೆನ್ನೈ ತಂಡವು ಅತ್ಯುತ್ತಮ ಫಾರಂನಲ್ಲಿದೆ. ಅಶಿಶ್ ನೆಹ್ರಾ ಅವರ 25ಕ್ಕೆ 3 ವಿಕೆಟ್  ಮತ್ತು ಬ್ರೆಂಡನ್ ಮೆಕಲಮ್ ಅವರ ಶತಕದ ಮೂಲಕ  ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ಸನ್ ರೈಸರ್ಸ್ ವಿರುದ್ಧ ಜಯಶಾಲಿಯಾಗಿ ಹೊರಹೊಮ್ಮಿದೆ. ಆಟದ ಎಲ್ಲಾ ವಿಭಾಗಗಳಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಸಿಎಸ್‌ಕೆ ಫೇವರಿಟ್ ಎನಿಸಿದೆ. 
ಮುಂಬೈ ಇಂಡಿಯನ್ಸ್:  11 ಸಂಭವನೀಯ ಆಟಗಾರರು:1. ಪಾರ್ಥಿವ್ ಪಟೇಲ್, 2. ಲೆಂಡ್ಸ್ ಸಿಮ್ಮನ್ಸ್,3. ಉನ್ಮುಕ್ತ್ ಚಂದ್,4. ರೋಹಿತ್ ಶರ್ಮಾ, 5. ಕೋರಿ ಆಂಡರ್ ಸನ್,6. ಕೀರನ್ ಪೋಲಾರ್ಡ್,7. ಹರ್ಭಜನ್ ಸಿಂಗ್, 8. ಜಗದೀಶ್ ಸುಚಿತ್, 9. ಲಸಿತ್ ಮಾಲಿಂಗಾ, 10. ವಿನಯ್ ಕುಮಾರ್,11.  ಪವನ್ ಸುಯಾಲ್ 
ಚೆನ್ನೈ ಸೂಪರ್ ಕಿಂಗ್ಸ್ 
ಸಂಭವನೀಯ 11 ಆಟಗಾರರು :1.  ಡ್ವೇನ್ ಸ್ಮಿತ್ 2 ಬ್ರೆಂಡನ್ ಮೆಕಲಮ್ 3 ಸುರೇಶ್ ರೈನಾ , 4.ಪ್ಲೆಸಿಸ್ , 5 ಧೋನಿ  (ನಾಯಕ, ವಿಕೆಟ್ ಕೀಪರ್, 6 ರವೀಂದ್ರ ಜಡೇಜಾ, 7 ಡ್ವೇನ್ ಬ್ರಾವೋ , 8 ಅಶ್ವಿನ್  9 ಮೋಹಿತ್ ಶರ್ಮಾ  10 ಆಶಿಶ್ ನೆರ್ಹಾ  11 ಈಶ್ವರ್ ಪಾಂಡೆ. 
 
 

ವೆಬ್ದುನಿಯಾವನ್ನು ಓದಿ