ಸ್ಮಿತ್, ಮೆಕಲಮ್ ಅಬ್ಬರ: ಮುಂಬೈ ವಿರುದ್ಧ ಚೆನ್ನೈಸೂಪರ್ ಕಿಂಗ್ಸ್‌ಗೆ ಜಯ

ಶನಿವಾರ, 18 ಏಪ್ರಿಲ್ 2015 (10:36 IST)
ಮುಂಬೈ ಇಂಡಿಯನ್ಸ್ ಬೌಲಿಂಗ್ ದಾಳಿಯನ್ನು ಧೂಳಿಪಟ ಮಾಡಿದ ಆರಂಭಿಕ ಆಟಗಾರರಾದ ಡ್ವೇನ್ ಸ್ಮಿತ್ ಮತ್ತು ಬ್ರೆಂಡನ್ ಮೆಕಲಮ್ 44 ಎಸೆತಗಳಲ್ಲಿ 109 ರನ್ ಸಿಡಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಜಯ ತಂದುಕೊಟ್ಟಿದ್ದಾರೆ. ಇದರಿಂದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಐಪಿಎಲ್‌ನಲ್ಲಿ ಸತತ 3ನೇ ಗೆಲುವನ್ನು ಗಳಿಸಿದರೆ, ಮುಂಬೈ ಇಂಡಿಯನ್ಸ್ ಸತತ 4 ಸೋಲುಗಳನ್ನು ಅನುಭವಿಸಿದೆ.

 
ಡ್ವೇನ್ ಸ್ಮಿತ್ 62 ರನ್ ಗಳಿಸಿದ್ದಾಗ ಹರ್ಭಜನ್ ಬೌಲಿಂಗ್‌ನಲ್ಲಿ ರೋಹಿತ್‌ಗೆ ಕ್ಯಾಚಿತ್ತು ಔಟಾದರು. ಸ್ವಲ್ಪ ಹೊತ್ತಿನಲ್ಲೇ ಮೆಕಲಮ್ ಕೂಡ ಹರ್ಭಜನ್ ಬೌಲಿಂಗ್‌ನಲ್ಲಿ ವಿನಯ್‌ಗೆ ಕ್ಯಾಚಿತ್ತು ಔಟಾದರು. ನಂತರ ಬಂದ ಸುರೇಶ್ ರೈನಾ 29 ಎಸೆತಗಳಲ್ಲಿ ಬಿರುಸಿನ 43 ರನ್ ಬಾರಿಸಿ ಬ್ರೇವೋ ಜೊತೆಗೂಡಿ ಚೆನ್ನೈಗೆ ಜಯ ತಂದಿತ್ತರು. 
 
ಸ್ಮಿತ್ ನಾಲ್ಕು ಸಿಕ್ಸರ್‌ಗಳು ಮತ್ತು 8 ಬೌಂಡರಿಗಳನ್ನು ಚಚ್ಚಿದರೆ ಮೆಕಲಮ್ 6  ಬೌಂಡರಿಗಳು ಮತ್ತು ಎರಡು ಸಿಕ್ಸರ್‌‌ಗಳನ್ನು ಚಚ್ಚಿದರು.  ಮೆಕಲಮ್ ಮತ್ತು ಸ್ಮಿತ್ ಅಬ್ಬರದ ಬ್ಯಾಟಿಂಗ್‌ನಿಂದ ಚೆನ್ನೈ ತಂಡದ ಗೆಲುವು ಖಚಿತವಾಗಿತ್ತು. ಸ್ಮಿತ್ 30 ಎಸೆತಗಳಲ್ಲಿ 62 ರನ್ ಬಾರಿಸಿದರೆ, ಮೆಕಲಮ್ 20 ಎಸೆತಗಳಲ್ಲಿ 46 ರನ್ ಸ್ಕೋರ್ ಮಾಡಿದರು.
ಮುಂಬೈ ಇಂಡಿಯನ್ಸ್ ಮೊದಲಿಗೆ ಬ್ಯಾಟಿಂಗ್ ಮಾಡಿ ಆರಂಭದಲ್ಲೇ 3 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.

ಆದರೆ ರೋಹಿತ್ ಶರ್ಮಾ ಮತ್ತು ಪೋಲಾರ್ಡ್ ಅವರ ಅಬ್ಬರದ ಆಟದ ಮೂಲಕ ಮುಂಬೈಗೆ ಚೇತರಿಕೆ ನೀಡಿದರು. ರೋಹಿತ್ ಶರ್ಮಾ 31 ಎಸೆತಗಳಲ್ಲಿ 50 ರನ್ ಮತ್ತು ಪೋಲಾರ್ಡ್ 30 ಎಸೆತಗಳಲ್ಲಿ 60 ರನ್ ಬಾರಿಸಿ ಮುಂಬೈಗೆ ಚೇತರಿಕೆ ನೀಡಿದರು. 
 

ವೆಬ್ದುನಿಯಾವನ್ನು ಓದಿ