ಬೆಂಗಳೂರು: ಇದೇ 23ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯವನ್ನು ಲಖನೌಗೆ ಮಳೆಯ ಕಾರಣದಿಂದ ಸ್ಥಳಾಂತರಿಸಲಾಗಿದೆ.
ಈ ಪಂದ್ಯಕ್ಕೂ ಮುನ್ನ ಆರ್‌ಸಿಬಿ ತಂಡದ ಬಾಂಡಿಂಗ್ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪಿಕಲ್‌ಬಾಲ್ ಆಡಿದ್ದು ಎಲ್ಲರ ಗಮನ ಸೆಳೆದಿದೆ. ಕಾರ್ಯಕ್ರಮದಲ್ಲಿ ಆಟಗಾರರು ತಮ್ಮ ಸಹಾಯಕ ಸಿಬ್ಬಂದಿ ಮತ್ತು ಕುಟುಂಬಗಳೊಂದಿಗೆ ಪಿಕಲ್‌ಬಾಲ್ ಆಡಿ ಸಂಭ್ರಮಿಸಿದ್ದಾರೆ.
ಆರ್‌ಸಿಬಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, ಪಾಯಿಂಟ್ ಪಡೆದ ನಂತರ ವಿರಾಟ್ ಕೊಹ್ಲಿ ಅವರು ತಮ್ಮ ಪತ್ನಿ ಅನುಷ್ಕಾ ಅವರನ್ನು ಅಭಿನಂದಿಸುತ್ತಿರುವುದು ಕಂಡುಬಂದಿದೆ. ಈ ಸ್ಟಾರ್ ಜೋಡಿಯ ಜೊತೆಗೆ, ಆರ್‌ಸಿಬಿ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಮತ್ತು ಅವರ ಪತ್ನಿ ಹಾಗೂ ಭಾರತೀಯ ಸ್ಕ್ವಾಷ್ ತಾರೆ ದೀಪಿಕಾ ಪಲ್ಲಿಕಲ್ ಕೂಡ ಹಾಜರಿದ್ದರು.
ಮೇ 17ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಕೆಕೆಆರ್ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ರದ್ದಾಗಿದ್ದ ಐಪಿಎಲ್ ಅಧಿಕೃತವಾಗಿ ಪುನರಾರಂಭಗೊಂಡಿತ್ತು. ಆರ್‌ಸಿಬಿ ಲೀಗ್ ಹಂತದ ತನ್ನ ಕೊನೆಯ ಎರಡು ಪಂದ್ಯಗಳನ್ನು ಲಕ್ನೋದಲ್ಲಿ ಆಡಲಿದ್ದು, ಮೇ 27ರಂದು ಏಕಾನಾ ಕ್ರೀಡಾಂಗಣದಲ್ಲಿ ಎಲ್‌ಎಸ್‌ಜಿ ವಿರುದ್ಧ ಆಡಲಿದೆ.