ವಾರ್ನರ್ ಅಬ್ಬರದ 93 ರನ್ : ಲಯನ್ಸ್ ವಿರುದ್ಧ ಗೆದ್ದ ಸನ್‌ರೈಸರ್ಸ್ ಫೈನಲ್‌ಗೆ ಲಗ್ಗೆ

ಶನಿವಾರ, 28 ಮೇ 2016 (10:47 IST)
ನಾಯಕ ಡೇವಿಡ್ ವಾರ್ನರ್ ಅಬ್ಬರದ 93 ರನ್ ಮೂಲಕ ಏಕಾಂಗಿಯಾಗಿ ಹೋರಾಡಿ ಗುಜರಾತ್ ಲಯನ್ಸ್ ವಿರುದ್ಧ 4 ವಿಕೆಟ್‌ಗಳಿಂದ ಗೆಲುವು ಗಳಿಸುವ ಮೂಲಕ  ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಫೈನಲ್‌ಗೆ ಲಗ್ಗೆ ಹಾಕಿದೆ. 163 ರನ್ ಬೆನ್ನಟ್ಟಿದ ಸನ್ ರೈಸರ್ಸ್ ಇನ್ನೂ ನಾಲ್ಕು ಎಸೆತಗಳು ಬಾಕಿವುಳಿದಿರುವಾಗಲೇ ಗುರಿಯನ್ನು ಮುಟ್ಟಿದರು.

ವಾರ್ನರ್ ಅವರ 58 ಎಸೆತಗಳ 93 ರನ್ ಸ್ಕೋರಿನಲ್ಲಿ 11 ಬೌಂಡರಿಗಳು ಮತ್ತು ಮೂರು ಸಿಕ್ಸರ್‌ಗಳಿದ್ದವು. ಸನ್‌ರೈಸರ್ಸ್ ಹೈದರಾಬಾದ್ ಭಾನುವಾರ ರಾಯಲ್ ಚಾಲೆಂಜರ್ಸ್ ತಂಡದ ವಿರುದ್ಧ ಮೊದಲ ಐಪಿಎಲ್ ಪ್ರಶಸ್ತಿಗಾಗಿ ಹೋರಾಟ ಮಾಡಲಿದೆ.
ಸನ್ ರೈಸರ್ಸ್ ಆರಂಭದಲ್ಲೇ ಆಘಾತ ಅನುಭವಿಸಿ ವಿಕೆಟ್‌ಗಳು ಬೀಳಲಾರಂಭಿಸಿದವು. ಆದರೆ ವಾರ್ನರ್ ಬಿಪುಲ್ ಶರ್ಮಾ ಬೆಂಬಲದೊಂದಿಗೆ ರನ್ ವೇಗವನ್ನು ಹೆಚ್ಚಿಸಿದರು. ಎದುರಾಳಿ ಬೌಲರುಗಳಿಗೆ ಬೆವರಿಳಿಸಿದ ವಾರ್ನರ್ ಜತೆಗೆ ಬಿಪುಲ್ ಅಜೇಯ 27 ರನ್ ಸ್ಕೋರ್ ಮಾಡಿದರು.
 
ಬಿಪುಲ್ ಅವರು ಪ್ರವೀಣ್ ಕುಮಾರ್ ಮತ್ತು ಧವಲ್ ಕುಲಕರ್ಣಿ ಬೌಲಿಂಗ್‌ನಲ್ಲಿ ಬಾರಿಸಿದ ಸಿಕ್ಸರ್‌ಗಳು ಸನ್ ರೈಸರ್ಸ್ ಪರವಾಗಿ ಪಂದ್ಯವನ್ನು ತಿರುಗಿಸಲು ನಿರ್ಣಾಯಕ ಪಾತ್ರವಹಿಸಿತು.
 
ಕೊನೆಯ ಓವರಿನಲ್ಲಿ 5 ರನ್ ಅಗತ್ಯವಿದ್ದು ವಾರ್ನರ್ ಪ್ರವೀಣ್ ಕುಮಾರ್ ಬೌಲಿಂಗ್‌ನ ಮೊದಲ ಎಸೆತದಲ್ಲೇ ಬೌಂಡರಿ ಸಿಡಿಸಿ ಸ್ಕೋರ್ ಸಮ ಮಾಡಿದರು ಮತ್ತು ಒಂದು ಸಿಂಗಲ್ ತೆಗೆದುಕೊಂಡು ಸರಾಗವಾಗಿ ಪಂದ್ಯವನ್ನು ಗೆದ್ದರು. ಇದಕ್ಕೆ ಮುಂಚೆ ಗುಜರಾತ್ ಲಯನ್ಸ್ ಕೂಡ ಆರಂಭದಲ್ಲಿ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆದರೆ ಆರಾನ್ ಫಿಂಚ್ ತಂಡವನ್ನು ಕಡಿಮೆ ಸ್ಕೋರಿನಿಂದ ರಕ್ಷಿಸಿ ಅರ್ಧಶತಕ ಸಿಡಿಸಿದ್ದರಿಂದ ಗುಜರಾತ್ 7 ವಿಕೆಟ್ ಕಳೆದುಕೊಂಡು 162 ರನ್ ಸ್ಪರ್ಧಾತ್ಮಕ ಮೊತ್ತವನ್ನು ಗಳಿಸಿತು. ಮೆಕಲಮ್ (32), ಕಾರ್ತಿಕ್(26) ಉಪಯುಕ್ತ ಕೊಡುಗೆ ನೀಡಿದರು.  ಭುವನೇಶ್ವರ್ ಕುಮಾರ್ ಮತ್ತು ಬೆನ್ ಕಟ್ಟಿಂಗ್ ತಲಾ 2 ವಿಕೆಟ್ ಕಬಳಿಸಿದರು.
 
 ಸನ್ ರೈಸರ್ಸ್ ಪರ ಶಿಖರ್ ಧವನ್(0) ಮತ್ತು ಹೆನ್ರಿಕ್ಸ್(11) ಆರಂಭದಲ್ಲೇ ಔಟಾದರು. ಧವನ್ ರನ್ ಔಟ್ ಆದರು ಮತ್ತು ಹೆನ್ರಿಕ್ಸ್  ಸ್ಮಿತ್ ಬೌಲಿಂಗ್‌ನಲ್ಲಿ ದ್ವಿವೇದಿಗೆ ಕ್ಯಾಚಿತ್ತು ಔಟಾದರು.
 
 15ನೇ ಓವರಿನಲ್ಲಿ ವಾರ್ನರ್ ಸ್ಮಿತ್ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸಿದರು. ಓಜಾ ಕೂಡ ಇನ್ನೊಂದು ಸಿಕ್ಸರ್ ಬಾರಿಸಿದ್ದರಿಂದ ಸನ್‌ರೈಸರ್ಸ್ 19 ರನ್ ಕಲೆಹಾಕಿತು.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 

ವೆಬ್ದುನಿಯಾವನ್ನು ಓದಿ