ಮಹಿಳಾ ಕ್ರಿಕೆಟ್ ನಲ್ಲೂ ಐಪಿಎಲ್ ಹವಾ?!

ಗುರುವಾರ, 27 ಜುಲೈ 2017 (09:12 IST)
ಮುಂಬೈ: ವಿಶ್ವಕಪ್ ನಲ್ಲಿ ಭಾರತ ತಂಡದ ಸುಧಾರಿತ ಪ್ರದರ್ಶನ ನೋಡಿದ ಮೇಲೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪುರುಷರ ಕ್ರಿಕೆಟ್ ನಲ್ಲಿರುವಂತೆ ಮಹಿಳಾ ಕ್ರಿಕೆಟ್ ನಲ್ಲೂ ಐಪಿಎಲ್ ಗೆ ಚಾಲನೆ ನೀಡಲಿದೆಯೇ?


ಹಾಗೆ ನೀಡಿದ್ದರೆ ಒಳ್ಳೆಯದಿತ್ತು. ಆ ದಿನಗಳಿಗೂ ಹೆಚ್ಚು ದೂರವಿರಲಿಕ್ಕಿಲ್ಲ ಎಂದು ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಹೇಳಿಕೊಂಡಿದ್ದಾರೆ. ವಿಶ್ವಕಪ್ ಯಾತ್ರೆ ಮುಗಿಸಿ ಭಾರತಕ್ಕೆ ಬಂದಿಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಿಥಾಲಿ ರಾಜ್ ಮಹಿಳಾ ಕ್ರಿಕೆಟಿಗರಿಗೂ ಐಪಿಎಲ್ ಶುರು ಮಾಡಿದ್ದರೆ ಒಳ್ಳೆಯದಿತ್ತು ಎಂದಿದ್ದಾರೆ.

ಮಹಿಳಾ ಕ್ರಿಕೆಟ್ ನಲ್ಲೂ ಐಪಿಎಲ್ ಶುರು ಮಾಡಿದ್ದರೆ, ನಮ್ಮ ಎಷ್ಟೋ ಯುವ ಆಟಗಾರ್ತಿಯರಿಗೆ ಪ್ರತಿಭೆ ಪ್ರದರ್ಶಿಸಲು ವೇದಿಕೆ ಸಿಗುತ್ತಿತ್ತು. ಅಷ್ಟೇ ಅಲ್ಲದೆ, ವಿದೇಶಿ ಆಟಗಾರರೊಂದಿಗೆ ಆಡಿ ಅನುಭವ ಹೆಚ್ಚಿಸಿಕೊಳ್ಳುತ್ತಿದ್ದರು. ಈಗಿನ ಭಾರತ ತಂಡ ಕೆಲವು ವಿದೇಶಿ ಲೀಗ್ ನಲ್ಲಿ ಆಡಿದ ಕಾರಣಕ್ಕೆ ಇಷ್ಟೊಂದು ಸುಧಾರಿತ ಪ್ರದರ್ಶನ ನೀಡಲು ಸಾಧ್ಯವಾಗಿದೆ.

ಇದೇ ರೀತಿ ಐಪಿಎಲ್ ಶುರು ಮಾಡಿದರೆ ಅವರಿಗೆ ಇನ್ನಷ್ಟು ವೇದಿಕೆ ಸಿಗುತ್ತದೆ. ಹಿಂದೆ ನಾನು ಆಡಲು ಪ್ರಾರಂಭಿಸಿದ ಕಾಲಕ್ಕೆ ಹೋಲಿಸಿದರೆ ಈಗ ಭಾರತದಲ್ಲಿ ಮಹಿಳಾ ಕ್ರಿಕೆಟ್ ಗೆ ಪ್ರೋತ್ಸಾಹ ದಿನೇ ದಿನೇ ಹೆಚ್ಚಾಗುತ್ತಿದೆ. ಸೌಲಭ್ಯಗಳು ಸುಧಾರಿಸುತ್ತಿವೆ. ಹಾಗಾಗಿ ಮುಂದೊಂದು ದಿನ ಐಪಿಎಲ್ ಆರಂಭವಾದರೂ ಅಚ್ಚರಿಯೇನಲ್ಲ. ಎಲ್ಲದಕ್ಕೂ ಬಿಸಿಸಿಐ ನಿರ್ಧಾರ ಮಾಡಬೇಕು ಎಂದು ಮಿಥಾಲಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ..  ಯಾವ ಹೊತ್ತಿನಲ್ಲಿ ಸ್ನಾನ ಮಾಡುವುದು ಉತ್ತಮ ಗೊತ್ತಾ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ