ರಸೆಲ್ ಮನೋಜ್ಞ 66 ರನ್ : ಕೆಕೆಆರ್‌ಗೆ ಕಿಂಗ್ಸ್ ಇಲೆವನ್ ವಿರುದ್ಧ ಜಯ

ಭಾನುವಾರ, 19 ಏಪ್ರಿಲ್ 2015 (11:48 IST)
ಆಂಡ್ರೆ ರಸೆಲ್ ಅವರ ಮನೋಜ್ಞ ಆಟದ ನೆರವಿನಿಂದ ಹಾಲಿ ಚಾಂಪಿಯನ್ಸ್ ಕೋಲ್ಕತಾ ನೈಟ್ ರೈಡರ್ಸ್  ಕಿಂಗ್ಸ್ ಇಲೆವನ್ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿ ಜಯಗಳಿಸಿತು. ಒಂದು ಹಂತದಲ್ಲಿ ಕೆಕೆಆರ್ 60 ರನ್‌ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿತ್ತು. ಆದರೆ ಜಮೈಕಾದ ಆಲ್‌ರೌಂಡರ್  ರಸೆಲ್ ಅವರ ಮಿಂಚಿನ 66 ರನ್ ನೆರವಿನಿಂದ 17. 5 ಓವರುಗಳಲ್ಲೇ 156 ರನ್ ಗುರಿಯನ್ನು ಮುಟ್ಟಿತು. 
 
ರಸೆಲ್ ಬೌಲಿಂಗ್‌ನಲ್ಲಿ ಕೂಡ ಮಿಂಚಿ 39 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು. ಬ್ಯಾಟಿಂಗ್‌ನಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 9.2 ಓವರುಗಳಲ್ಲಿ  ಯುಸುಫ್ ಪಠಾಣ್  ಜೊತೆಗೆ 95 ರನ್ ಜೊತೆಯಾಟವಾಡಿದರು.  ರಸೆಲ್ ಔಟಾದಾಗ ಕೆಕೆಆರ್ ಸ್ಕೋರ್ ಟೈ ಆಗಿತ್ತು. ಸಾಧಾರಣ ಮೊತ್ತ ಬಾರಿಸಿದ್ದ ಕಿಂಗ್ಸ್ ಇಲೆವನ್ ಪರ ಯುವ ಆಟಗಾರ ಸಂದೀಪ್ ಶರ್ಮಾ ಮನೋಜ್ಞ ಬೌಲಿಂಗ್ ಪ್ರದರ್ಶನ ನೀಡಿ 25 ರನ್ ನೀಡಿ 4 ವಿಕೆಟ್ ಕಬಳಿಸಿದರು. 
 
ಸಂದೀಪ್ ರಾಬಿನ್ ಉತ್ತಪ್ಪಾ, ಮನೀಶ್ ಪಾಂಡೆ, ರಯಾನ್ ಟೆನ್ ಡಸ್ಕಾಟೆ ಅವರನ್ನು ಔಟ್ ಮಾಡಿದರು. ನಾಯಕ ಗೌತಮ್ ಗಂಭೀರ್ ಸಂದೀಪ್ ಬೌಲಿಂಗ್‌ನಲ್ಲಿ ವೃದ್ಧಿಮಾನ್ ಸಹಾ ಸುಲಭ ಕ್ಯಾಚ್ ಹಿಡಿದರು. 
 
 ಇದಕ್ಕೆ ಮುಂಚೆ ಕೋಲ್ಕತಾ ನೈಟ್ ರೈಡರ್ಸ್ ಶಿಸ್ತಿನ ಬೌಲಿಂಗ್ ದಾಳಿಯಿಂದ ಕಿಂಗ್ಸ್ ಇಲೆವನ್ 9 ವಿಕೆಟ್ ಕಳೆದುಕೊಂಡು 155 ರನ್ ಗಳಿಸಿತು. ತವರು ತಂಡದಲ್ಲಿ ನಾಯಕ ಜಾರ್ಜ್ ಬೈಲಿ 45 ಎಸೆತಗಳಲ್ಲಿ 60 ಉಪಯುಕ್ತ ಸ್ಕೋರ್ ಮಾಡಿದರು. ಮ್ಯಾಕ್ಸ್‌ವೆಲ್ 33 ರನ್ ಬಾರಿಸಿದರು.
 
 ವೇಗಿಗಳಾದ ಉಮೇಶ್ ಯಾದವ್ (3/33) ಮಾರ್ಕೆಲ್ (2/ 27), ಆಂಡ್ರೆ ರಸೆಲ್(2/39) ಮೊನಚಿನ ಬೌಲಿಂಗ್ ದಾಳಿಯಿಂದ ಕಿಂಗ್ಸ್ ಇಲೆವೆನ್ ಬ್ಯಾಟ್ಸ್‌ಮನ್‌ಗಳು ಮೇಲುಗೈ ಪಡೆಯದಂತೆ ಮಾಡಿದರು. ಸ್ಪಿನ್ನರ್ ಸುನಿಲ್ ನಾರಾಯಣ್ ಅತೀ ಕಡಿಮೆ ರನ್ ನೀಡಿ ಒಂದು ವಿಕೆಟ್ ಗಳಿಸಿದರು. 

ವೆಬ್ದುನಿಯಾವನ್ನು ಓದಿ