ಶಾರುಖ್ ವಾಂಖಡೆ ಪ್ರವೇಶ ನಿಷೇಧ ತೆರವು

ಭಾನುವಾರ, 2 ಆಗಸ್ಟ್ 2015 (15:55 IST)
ಬಾಲಿವುಡ್ ಬಾದಶಾ, ಕಿಂಗ್ ಖಾನ್ ಎಂದೇ ಪ್ರಸಿದ್ಧರಾಗಿರುವ ಶಾರುಖ್ ಖಾನ್ ಅವರಿಗೆ ಮುಂಬೈನ ವಾಂಖಡೆ ಕ್ರಿಕೆಟ್ ಸ್ಟೇಡಿಯಂ ಪ್ರವೇಶಿಸದಂತೆ ಹೇರಿದ್ದ ನಿಷೇಧವನ್ನು ಮುಂಬೈ ಕ್ರಿಕೆಟ್ ಸಂಸ್ಥೆ ತೆರವುಗೊಳಿಸಿದೆ.
ಎಂಸಿಎ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಎಂಸಿಎ ಉಪಾಧ್ಯಕ್ಷ ಆಶೀಷ್‌ ಶೇಲಾರ್‌ ಸುದ್ದಿಗಾರರಿಗೆ ತಿಳಿಸಿದರು.
 
ಕೋಲ್ಕತ್ತ ನೈಟ್ ರೈಡರ್ಸ್‌ ಮಾಲೀಕ ಶಾರೂಕ್ ಖಾನ್‌ 2012 ರ ಮೇನಲ್ಲಿ ವಾಂಖಡೆ ಮೈದಾನದಲ್ಲಿ ಕೆಕೆಆರ್ ಹಾಗೂ ಮುಂಬೈ ಇಂಡಿಯನ್ಸ್‌ ಮಧ್ಯೆ ನಡೆದ ಐಪಿಎಲ್ ಪಂದ್ಯದ ವೇಳೆ ಭದ್ರತಾ ಸಿಬ್ಬಂದಿ ಮತ್ತು ಎಂಸಿಎ ಅಧಿಕಾರಿಗಳ ಜತೆ ಅಸಭ್ಯವಾಗಿ ವರ್ತಿಸಿದ್ದರು. 
 
ತಮ್ಮ ತಂಡ ಗೆದ್ದ ಸಂತಷದಲ್ಲಿ ಮೈದಾನವನ್ನು ಪ್ರವೇಶಿಸಲು ಪ್ರಯತ್ನಿಸಿದ್ದ ಅವರನ್ನು ತಡೆದ ಭದ್ರತಾ ಅಧಿಕಾರಿಗಳ ಜತೆ ಅವರು ವಾಗ್ವಾದ ನಡೆಸಿದ್ದರು. ನಂತರ ಪರಷ್ಪರ ತಳ್ಳಾಟವೂ ನಡೆದಿತ್ತು. ಈ ಹಿನ್ನೆಲೆಯಲ್ಲಿ 5 ವರ್ಷ ವಾಂಖೆಡೆ ಮೈದಾನ ಪ್ರವೇಶಿಸದಂತೆ ಶಾರೂಕ್‌ ಮೇಲೆ ಎಂಸಿಎ ನಿಷೇಧ ಹೇರಿತ್ತು. ಹೀಗಾಗಿ 3 ವರ್ಷಗಳಿಂದ ಶಾರುಖ್ ವಾಂಖಡೆ ಮೈದಾನದಲ್ಲಿ ಪ್ರವೇಶಿಸಿರಲಿಲ್ಲ.  
 
ಆದರೆ 3 ವರ್ಷಕ್ಕೆ ಎಂಸಿಎ ಶಾರೂಕ್ ಮೇಲಿನ ನಿಷೇಧವನ್ನು ತೆಗೆದು ಹಾಕಿ ಕ್ರೀಡಾಂಗಣ ಪ್ರವೇಶಿಸುವುದಕ್ಕೆ ಅವಕಾಶ ನೀಡಿದೆ. ಶಾರುಖ್ ಅವರಿಗೆ ಕ್ರಿಕೆಟ್ ಮೇಲಿರುವ ಆಸಕ್ತಿ ಮತ್ತು ತಮ್ಮ ತಪ್ಪಿಗೆ ಅವರು ಬಹಿರಂಗ ಕ್ಷಮೆಯಾಚಿಸಿರುವುದನ್ನು ಪರಿಗಣಿಸಿ ಅವರ ಮೇಲಿನ ನಿಷೇಧವನ್ನು ತೆರವುಗೊಳಿಸಲಾಗಿದೆ ಎಂದು ಮಾಹಿತಿ ಲಭಿಸಿದೆ. 

ವೆಬ್ದುನಿಯಾವನ್ನು ಓದಿ