ರಾಯಲ್ ಚಾಲೆಂಜರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್‌ಗೆ ಜಯ

ಸೋಮವಾರ, 20 ಏಪ್ರಿಲ್ 2015 (13:50 IST)
ಮುಂಬೈ ಇಂಡಿಯನ್ಸ್ ತಂಡವು ಬೆಂಗಳೂರು ಚಾಲೆಂಜರ್ಸ್ ತಂಡದ ವಿರುದ್ಧ 18 ರನ್ ಜಯಗಳಿಸುವ ಮೂಲಕ ಐಪಿಎಲ್ ಸರಣಿಯಲ್ಲಿ ಚೊಚ್ಚಲ ಜಯವನ್ನು ದಾಖಲಿಸಿದೆ.  ಆರಂಭದಲ್ಲಿ ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಪರ ಸಿಮ್ಮನ್ಸ್ ಮತ್ತು ಉನ್‌ಮುಕ್ತ್ ಚಂದ್ ಅರ್ಧಶತಕಗಳನ್ನು ಸಿಡಿಸಿ ಮುಂಬೈ 7 ವಿಕೆಟ್‌ ಕಳೆದುಕೊಂಡು 209 ರನ್ ಬೃಹತ್ ಮೊತ್ತ ಗಳಿಸಲು ನೆರವಾದರು. ನಂತರ ಹರ್ಭಜನ್ ಸಿಂಗ್ ತಮ್ಮ ಸ್ಪಿನ್ ಮಂತ್ರದಂಡ ಪ್ರಯೋಗಿಸಿ ಆರ್‌ಸಿಬಿಯನ್ನು 191 ರನ್‌ಗೆ ನಿರ್ಬಂಧಿಸುವ ಮೂಲಕ ಚೊಚ್ಚಲ ಗೆಲುವಿನ ಸಿಹಿಯನ್ನು ಅನುಭವಿಸಿದೆ.
 
 ಗೆಲುವಿಗೆ 201ರನ್ ಮೊತ್ತ ಬೆನ್ನೆತ್ತಿದ ಆರ್‌ಸಿಬಿ ಉತ್ತಮ ಆರಂಭ ಕಾಣದೇ ಆರಂಭದಲ್ಲೇ ಆಘಾತ ಅನುಭವಿಸಿತು. ಆರ್‌ಸಿಬಿಯ ರನ್ ಚೇಸ್ ಕ್ರಿಸ್ ಗೇಲ್ ಅವರ ಸ್ಫೋಟಕ ಆರಂಭವನ್ನು ಅವಲಂಬಿಸಿತ್ತು. ಆದರೆ ವೆಸ್ಟ್ ಇಂಡೀಸ್ ಆಟಗಾರ 2 ಜೀವದಾನ ಪಡೆದ ಬಳಿಕವೂ 20 ಎಸೆತಗಳಲ್ಲಿ ಕೇವಲ 10 ರನ್ ಗಳಿಸಿ ಔಟಾದರು.
 
 ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಕೂಡ ಬೇಗನೇ ಸ್ಕೋರ್ ಮಾಡಲು ಯತ್ನಿಸಿ ಮೆಕ್‌ಕ್ಲಿನಾಗನ್ ಬೌಲಿಂಗ್‌ನಲ್ಲಿ ಅಂಬಾಟಿ ರಾಯುಡುಗೆ ಕ್ಯಾಚಿತ್ತು ಔಟಾದರು.  ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಕೂಡ ಮಾಲಿಂಗ ಬೌಲಿಂಗ್‍‌ನಲ್ಲಿ ಉನ್‌ಮುಕ್ತ್‌ಗೆ ಕ್ಯಾಚಿತ್ತು ಔಟಾದರು. 
 
 ಕೊನೆಯಲ್ಲಿ ಡೇವಿಡ್ ವೈಸ್ ( 25 ಎಸೆತಗಳಲ್ಲಿ 47) ಸ್ಫೋಟಕ ಆಟವಾಡಿದರೂ 209 ಮೊತ್ತವನ್ನು ಮುಟ್ಟುವುದು ಸಾಧ್ಯವಾಗದೇ ಬೆಂಗಳೂರು 191 ರನ್‌ಗೆ ಆಲೌಟ್‌ ಆಯಿತು. 

ವೆಬ್ದುನಿಯಾವನ್ನು ಓದಿ