ಪಂಜಾಬ್ ವಿರುದ್ಧ ಸೋತ ಆರ್‌ಸಿಬಿ ಪ್ಲೇ ಆಫ್ ಹಾದಿ ಕಠಿಣ

ಗುರುವಾರ, 14 ಮೇ 2015 (11:11 IST)
ಕಿಂಗ್ಸ್ ಇಲೆವನ್ ಪಂಜಾಬ್ ಬೆಂಗಳೂರು ತಂಡವನ್ನು ತವರು ನೆಲದಲ್ಲಿ ಸೋಲಿಸಿದ್ದರಿಂದ ಪ್ಲೇ ಆಫ್‌ಗೆ ಪ್ರವೇಶಿಸುವ ರಾಯಲ್ ಚಾಲೆಂಜರ್ಸ್ ಹಾದಿ ಕಠಿಣವಾಗಿದೆ. ಮಳೆಯಿಂದಾಗಿ ತಡವಾಗಿ ಆರಂಭವಾದ ಪಂದ್ಯವನ್ನು 10 ಓವರುಗಳಿಗೆ ಕಡಿತಗೊಳಿಸಲಾಯಿತು. ಟಾಸ್ ಗೆದ್ದು ಆರ್‌ಸಿಬಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.
 
ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ಪಂಜಾಬ್ ಪರ ವೃದ್ಧಿಮಾನ್ ಸಹಾ 12 ಎಸೆತಗಳಲ್ಲಿ ಬಿರುಸಿನ 31 ರನ್ ಚಚ್ಚಿದ್ದರಿಂದ ಕಿಂಗ್ಸ್ ಇಲೆವನ್ 6 ವಿಕೆಟ್‌ಗೆ 106 ರನ್ ಗಳಿಸುವುದು ಸಾಧ್ಯವಾಯಿತು. ಆದರೆ ರಾಯಲ್ಸ್ ಚಾಲೆಂಜರ್ಸ್ ಸ್ಟಾರ್ ಬ್ಯಾಟ್ಸ್‌ಮನ್‌ಗಳು ಈ ಬಾರಿ ವಿಫಲರಾಗಿ 10 ಓವರುಗಳಲ್ಲಿ 6 ವಿಕೆಟ್ ಕಳೆದುಕೊಂಡು 84 ರನ್ ಮಾತ್ರ ಗಳಿಸಿದ್ದರಿಂದ ಸೋಲಪ್ಪಿತು. 
 
ನಾಯಕ ಕೊಹ್ಲಿ ಅನುರೀತ್ ಸಿಂಗ್ ಬೌಲಿಂಗ್‌ನಲ್ಲಿ ಎರಡು ಬೌಂಡರಿ ಮತ್ತು ನೇರ ಸಿಕ್ಸರ್ ಸಿಡಿಸಿದ ನಂತರ ಕೊನೆಯ ಎಸೆತದಲ್ಲಿ ಬೌಲ್ಡ್  ಔಟಾದರು. ಆದರೆ ಗೇಲ್ ಮತ್ತು ಡಿ ವಿಲಿಯರ್ಸ್ ಅವರಿಗೆ ಈ ರನ್ ಚೇಸ್ ಮಾಡುವುದು ಕಷ್ಟವೇನಿರಲಿಲ್ಲ. ಆದರೆ ಇವರ ಜೊತೆಯಾಟ ಹೆಚ್ಚು ಕಾಲ ಉಳಿಯದೇ ಸಂದೀಪ್ ಶರ್ಮಾ ಎಸೆತದಲ್ಲಿ ಗೇಲ್ ಕ್ಯಾಚಿತ್ತು ಔಟಾದರು.
 
 ಈ ಹಂತದಲ್ಲಿ ಪ್ರವಾಸಿ ತಂಡ 4.4 ಓವರುಗಳಲ್ಲಿ 2 ವಿಕೆಟ್ ಕಳೆದುಕೊಂಡು  44 ರನ್ ಗಳಿಸಿತ್ತು. ಡಿವಿಲಿಯರ್ಸ್ ಶಾರ್ಟ್ ಫೈನ್ ಲೆಗ್‌ನಲ್ಲಿ ಕ್ಯಾಚಿತ್ತು ಔಟಾದಾಗ ತಂಡಕ್ಕೆ 20 ಎಸೆತಗಳಲ್ಲಿ 40 ರನ್ ಅಗತ್ಯವಿತ್ತು. ಮಂದೀಪ್ ಸಿಂಗ್ ಮತ್ತು ಕಾರ್ತಿಕ್ ಶರ್ಮಾ ಕೂಡ ಬೇಗನೇ ಔಟಾಗಿದ್ದರಿಂದ ಆರ್‌ಸಿಬಿ ಸೋಲಪ್ಪಿತು.
 
 ರಾಯಲ್ ಚಾಲೆಂಜರ್ಸ್ 12 ಪಂದ್ಯಗಳಲ್ಲಿ 13 ಪಾಯಿಂಟ್ ಗಳಿಸಿದ್ದು ಇನ್ನೂ 2 ಪಂದ್ಯಗಳು ಬಾಕಿವುಳಿದಿದ್ದು, ಪ್ಲೇ ಆಫ್ ಹಾದಿ ಕಠಿಣವಾಗಿದೆ. ಕಿಂಗ್ಸ್ ಇಲೆವನ್ ಈಗಾಗಲೇ ಸ್ಪರ್ಧೆಯಿಂದ ಹೊರಗುಳಿದಿದ್ದು, ಕೇವಲ 3 ಪಂದ್ಯಗಳನ್ನು ಮಾತ್ರ ಗೆದ್ದಿದ್ದಾರೆ. 

ವೆಬ್ದುನಿಯಾವನ್ನು ಓದಿ