ಟ್ರೆಂಟ್ ಬೌಲ್ಟ್ ಪರಿಣಾಮಕಾರಿ ಬೌಲಿಂಗ್: ಪಂಜಾಬ್ ವಿರುದ್ಧ ಸನ್‌ರೈಸರ್ಸ್‌ಗೆ ಜಯ

ಮಂಗಳವಾರ, 28 ಏಪ್ರಿಲ್ 2015 (12:09 IST)
ಕಿಂಗ್ಸ್ ಇಲೆವನ್ ಪಂಜಾಬ್ ಮೊಹಾಲಿಯಲ್ಲಿ ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ವಿರುದ್ಧ 20 ರನ್ ಅಂತರದಿಂದ ಸೋಲನುಭವಿಸಿದೆ.  ಸನ್‌ರೈಸರ್ಸ್ ತಂಡವನ್ನು ಕೇವಲ 6 ವಿಕೆಟ್‌ಗೆ 150 ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದ ಪಂಜಾಬ್ ರನ್ ಚೇಸ್ ಮಾಡುವುದಕ್ಕೆ ವಿಫಲರಾಗಿ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡು 20 ರನ್ ಅಂತರದಿಂದ ಸೋಲನುಭವಿಸಿತು.
 
ವೃದ್ಧಿಮಾನ್ ಸಹಾ ಉತ್ತಮ ಪ್ರಯತ್ನ ಮಾಡಿ 33 ಎಸೆತಗಳಿಗೆ 42 ರನ್ ಬಾರಿಸಿದರೂ ಇನ್ನೊಂದು ಕೊನೆಯಿಂದ ಸೂಕ್ತ ಬೆಂಬಲ ಸಿಗದೇ ಕಿಂಗ್ಸ್ ಇಲೆವನ್ ಸೋಲಪ್ಪಿತು.  151 ರನ್ ಬೆನ್ನೆತ್ತಿದ ಪಂಜಾಬ್ ತಂಡ ಆರಂಭದಲ್ಲೇ ಮನನ್ ವೋಹ್ರಾ ಮತ್ತು ಶಾನ್ ಮಾರ್ಷ್ ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿತು.   ಟ್ರೆಂಟ್ ಬೌಲ್ಟ್ ಯಾರ್ಕರ್ ಎಸೆತಕ್ಕೆ ವೋಹ್ರಾ ಬ್ಯಾಟ್ ತುದಿಗೆ ಚೆಂಡು ತಾಗಿ ಕ್ಯಾಚ್‌ಗೆ ಬಲಿಯಾದರು.

ಮಾರ್ಷ್ ಕೂಡ ಭುವನೇಶ್ವರ್ ಕುಮಾರ್ ಬೌಲಿಂಗ್‌ನಲ್ಲಿ ಅದೇ ರೀತಿ ಔಟಾದರು. ಬೈಲಿ ಮತ್ತು ಮುರಳಿ ವಿಜಯ್ ವೇಗವಾಗಿ 32 ರನ್ ಸೇರಿಸಿದರೂ ಇಬ್ಬರೂ ಬೇಗನೇ ಔ ಟಾದರು.  ಡೇವಿಡ್ ಮಿಲ್ಲರ್ ಮತ್ತು ಸಹಾ ರನ್ ಚೇಸ್ ನಿಧಾನವಾಗಿ ಮಾಡಿದರು. ಆದರೆ 8 ಓವರುಗಳಲ್ಲಿ 80 ರನ್ ಅಗತ್ಯವಾಗಿದ್ದರಿಂದ ರನ್ ಗತಿ ಹೆಚ್ಚಿಸುವ ಅಗತ್ಯವಿತ್ತು.  ಕರಣ್ ಶರ್ಮಾ ಬೌಲಿಂಗ್‌ನಲ್ಲಿ ಮಿಲ್ಲರ್ ಔಟಾದ ಬಳಿಕ ಗೆಲ್ಲುವ ಪಂಜಾಬ್ ಆಸೆ ಕಮರಿತು.
 
ಎರಡು ಜೀವದಾನದ ಉಪಯೋಗ ಪಡೆದ ಸಹಾ ಕೆಲವು ಉತ್ತಮ ಶಾಟ್‌ಗಳನ್ನು ಬಾರಿಸಿ, ಕೊನೆಯ ನಾಲ್ಕು ಓವರುಗಳಲ್ಲಿ 46 ರನ್ ಅಗತ್ಯವಿತ್ತು. ಬೌಲ್ಟ್  ಕಡೆಯ ಓವರಿನಲ್ಲಿ ಅಕ್ಸರ್ ಪಟೇಲ್ ಮತ್ತು ಸಹಾ ವಿಕೆಟ್‌ ಕಬಳಿಸಿದ್ದರಿಂದ  ಪಂಜಾಬ್ ಗೆಲ್ಲುವ ಆಸೆ ಕ್ಷೀಣಿಸಿತು. ಮೊದಲಿಗೆ ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಪರ ಶಿಖರ್ ಧವನ್ ಮಿಚೆಲ್ ಜಾನ್ಸನ್ ಬೌಲಿಂಗ್‌ನಲ್ಲಿ ಕ್ಯಾಚಿತ್ತು ಔಟಾದರು. ಒಂದು ಕಡೆ ವಾರ್ನರ್ ಬಿರುಸಿನ ಆಟವಾಡುತ್ತಿದ್ದರೆ, ಇನ್ನೊಂದು ಕಡೆ ಹನುಮಾ ವಿಹಾರಿ ಕೂಡ ವಾರ್ನರ್ ಅವರನ್ನು ಅನುಕರಿಸಲು ಪ್ರಯತ್ನಿಸಿ ಕ್ಯಾಚ್ ನೀಡಿ ಔಟಾದರು. 
 
ನಂತರ ವಾರ್ನರ್ ಕೂಡ 58 ರನ್ ಗಳಿಸಿ ಅಕ್ಷರ್ ಬೌಲಿಂಗ್‌ನಲ್ಲಿ ಮಿಲ್ಲರ್‌‍ಗೆ ಲಾಂಗ್ ಆನ್‌ನಲ್ಲಿ ಕ್ಯಾಚ್ ನೀಡಿ ಔಟಾಗಿದ್ದು ಸನ್‌ರೈಸರ್ಸ್ ತಂಡಕ್ಕೆ ನಿರಾಶೆವುಂಟುಮಾಡಿತು. ಕೊನೆಯಲ್ಲಿ ಆಶಿಶ್ ರೆಡ್ಡಿ ಎರಡು ಸತತ ಸಿಕ್ಸರ್‌ಗಳನ್ನು ಬಾರಿಸಿದ್ದರಿಂದ ಸನ್ ರೈಸರ್ಸ್ ಸ್ಪರ್ಧಾತ್ಮಕ ಸ್ಕೋರ್ ಮುಟ್ಟಲು ಸಾಧ್ಯವಾಯಿತು. 
 

ವೆಬ್ದುನಿಯಾವನ್ನು ಓದಿ