ಕೊಹ್ಲಿ ಅಬ್ಬರ, ಸ್ಟಾರ್ಕ್ ಮಾರಕ ದಾಳಿ: ಆರ್‌ಸಿಬಿಗೆ ರಾಯಲ್ಸ್ ವಿರುದ್ಧ ಜಯ

ಶನಿವಾರ, 25 ಏಪ್ರಿಲ್ 2015 (10:43 IST)
ಆರ್‌ಸಿಬಿ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ನಡೆದ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿಯ ನಾಯಕ ವಿರಾಟ್ ಕೊಹ್ಲಿ ಮತ್ತು ಡಿವಿಲಿಯರ್ಸ್ ಅವರ ಉತ್ತಮ ಜೊತೆಯಾಟದ ‌ನೆರವಿನಿಂದ ಆರ್‌ಸಿಬಿ 9 ವಿಕೆಟ್‌ಗಳಿಂದ ಜಯಗಳಿಸುವ ಮೂಲಕ ಚೇತರಿಸಿಕೊಂಡಿದೆ. ರಾಜಸ್ಥಾನ ರಾಯಲ್ಸ್ ತಂಡದ ಸಾಧಾರಣ ಮೊತ್ತವಾದ 130 ರನ್  ಗುರಿ ಬೆನ್ನೆತ್ತಿದ ಆರ್‌ಸಿಬಿ ಪರ ಕ್ರಿಸ್ ಗೇಲ್ ಆರಂಭದಲ್ಲೇ ಬಿರುಸಿನ ಆಟವಾಡಿದರು. ಅವರ 20 ರನ್ ಸ್ಕೋರಿನಲ್ಲಿ 3 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿತ್ತು. ಗೇಲ್ ಅವರು ವಾಟ್ಸನ್ ಬೌಲಿಂಗ್‌ನಲ್ಲಿ ಸ್ಯಾಮ್ಸನ್‌ಗೆ ಕ್ಯಾಚಿತ್ತು ಔಟಾದರು.
 
ಗೇಲ್ ಔಟಾದ ನಂತರ ಡಿವಿಲಿಯರ್ಸ್ ಮತ್ತು ಕೊಹ್ಲಿ ಅಬ್ಬರದ ಆಟವಾಡಿದರು. ಕೊಹ್ಲಿ 46 ಎಸೆತಗಳಲ್ಲಿ 62 ರನ್ ಬಾರಿಸಿದರು. ಅವರ ಸ್ಕೋರಿನಲ್ಲಿ 3 ಸಿಕ್ಸರ್‌ಗಳಿದ್ದರೆ ಕೇವಲ ಒಂದು ಬೌಂಡರಿಯಿತ್ತು. ಡಿ ವಿಲಿಯರ್ಸ್ 34 ಎಸೆ ತಗಳಲ್ಲಿ 47 ರನ್ ಹೊಡೆದಿದ್ದು, ಅವರ ಸ್ಕೋರಿನಲ್ಲಿ 6 ಬೌಂಡರಿಗಳಿತ್ತು. ಕೊಹ್ಲಿ 7ನೇ ಓವರಿನಲ್ಲಿ ತಾಂಬೆ ಎಸೆತದಲ್ಲಿ ಒಂದು ಸಿಕ್ಸರ್ ಬಾರಿಸಿದರು. ನಂತರ 13 ನೇ ಓವರಿನಲ್ಲಿ ವಾಟ್ಸನ್ ಎಸೆತದಲ್ಲಿ ಕೊಹ್ಲಿ ಇನ್ನೊಂದು ಸಿಕ್ಸರ್ ಬಾರಿಸಿದರು.
 
ಪುನಃ 14ನೇ ಓವರಿನಲ್ಲಿ ತಾಂಬೆ ಬೌಲಿಂಗ್‌ನಲ್ಲಿ ಕೊಹ್ಲಿ ಮುನ್ನುಗ್ಗಿ ಲಾಂಗ್ ಆನ್‌ನಲ್ಲಿ ಸಿಕ್ಸರ್ ಬಾರಿಸಿದರು.  ಆರ್‌ಸಿಬಿ ಆಡಿದ ಮೊದಲ ಪಂದ್ಯದಲ್ಲಿ ಕ್ರಿಸ್ ಗೇಲ್ ಅವರ ಸ್ಫೋಟಕ ಆಟದಿಂದಾಗಿ ಜಯಗಳಿಸಿತ್ತು. ಆದರೆ ನಂತರ ಮೂರು ಪಂದ್ಯಗಳಲ್ಲಿ ಸೋತು ಪಾಯಿಂಟ್ ಪಟ್ಟಿಯಲ್ಲಿ ಕಡೆಯ ಸ್ಥಾನದಲ್ಲಿತ್ತು. ಈಗ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ರಾಜಸ್ಥಾನವನ್ನು ಸೋಲಿಸುವ ಮೂಲಕ ಬೆಂಗಳೂರು ತಂಡವು ಚೇತರಿಸಿಕೊಂಡಿದೆ.  ಮೊದಲಿಗೆ ಬ್ಯಾಟಿಂಗ್ ಮಾಡಿದ ರಾಜಸ್ಥಾನದ ಪರ ರಹಾನೆ ನಾಲ್ಕನೇ ಓವರಿನಲ್ಲಿ ಹರ್ಷದ್ ಪಟೇಲ್ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು.  ರಹಾನೆ ಔಟಾಗಿದ್ದರಿಂದ ಆರ್‌ಸಿಬಿಗೆ ನಿರಾಳವಾಯಿತು.ನಂತರ ಐದನೇ ಓವರಿನಲ್ಲಿ ಚಾಹಲ್ ಬೌಲಿಂಗ್‌ನಲ್ಲಿ ಮಿಚೆಲ್ ಸ್ಟಾರ್ಕ್  ಉತ್ತಮ ಕ್ಯಾಚ್ ಹಿಡಿದು ವಾಟ್ಸನ್ ಅವರನ್ನು ಔಟ್ ಮಾಡಿದರು.
 
 9ನೇ ಓವರಿನಲ್ಲಿ ಕೊಹ್ಲಿ ಬೌಲಿಂಗ್‌ನಲ್ಲಿ ಕರುಣ್ ನಾಯರ್ ರನ್ ಔಟ್ ಆದರು. 11 ನೇ ಓವರಿನಲ್ಲಿ ಅಬ್ದುಲಾ ಬೌಲಿಂಗ್‌ನಲ್ಲಿ ದೀಪಕ್ ಹೂಡಾ ಬೌಲ್ಡ್ ಆದರು. ನಂತರ ಸ್ಯಾಮ್ಸನ್ ಚಾಹಲ್ ಸ್ಪಿನ್ ಎಸೆತಕ್ಕೆ ಬೌಲ್ಡ್ ಆದಾಗ ರಾಜಸ್ಥಾನ ಅರ್ಧದಷ್ಟು ವಿಕೆಟ್ ಕಳೆದುಕೊಂಡು 89 ರನ್ ಮಾತ್ರ ಸ್ಕೋರ್ ಮಾಡಿತ್ತು.
.
17ನೇ ಓವರಿನಲ್ಲಿ ಸ್ಟಾರ್ಕ್ ದಾಳಿ ಆರಂಭಿಸಿದಾಗ ಸ್ಮಿತ್ ಮೊದಲ ಎಸೆತದಲ್ಲೇ ಕಾರ್ತಿಕ್‌ಗೆ ಕ್ಯಾಚಿತ್ತು ಔಟಾದರು. ನಂತರ ಐದನೇ ಎಸೆತದಲ್ಲಿ ಬಿನ್ನಿ ವೈಸಲ್‌ಗೆ ಕ್ಯಾಚಿತ್ತು ಔಟಾದರು.  19ನೇ ಓವರಿನಲ್ಲಿ ಸ್ಟಾರ್ಕ್ ಕುಲಕರ್ಣಿಯನ್ನು ಬೌಲ್ಡ್ ಮಾಡಿದರು. ಸ್ಟಾರ್ಕ್ ತಮ್ಮ ಮಾರಕ ಬೌಲಿಂಗ್ ದಾಳಿಯಿಂದ 3 ವಿಕೆಟ್ ಕಬಳಿಸಿ ಪಂದ್ಯಶ್ರೇಷ್ಟ ಪ್ರಶಸ್ತಿಗೆ ಪಾತ್ರರಾದರು.  ಆಸ್ಟ್ರೇಲಿಯಾದ ವೇಗಿ ಸ್ಟಾರ್ಕ್ ಸೇರ್ಪಡೆಯಿಂದ ಆರ್‌ಸಿಬಿ ಬೌಲಿಂಗ್ ಮೊನಚಾಗಿದ್ದು, ಸ್ಟಾರ್ಕ್ ಕಡೆಯಲ್ಲಿ ಮೂರು ವಿಕೆಟ್ ಕಬಳಿಸಿದ್ದರಿಂದ ರಾಯಲ್ಸ್ ರನ್ ವೇಗಕ್ಕೆ ಕಡಿವಾಣ ಬಿದ್ದಿತ್ತು. 
 

ವೆಬ್ದುನಿಯಾವನ್ನು ಓದಿ