ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಪ್ರಸಕ್ತ ಆವೃತ್ತಿ ನಿರ್ಣಾಯಕ ಘಟ್ಟಕ್ಕೆ ತಲುಪಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಮೇಲಿರುವ ತಂಡಗಳು ಪ್ಲೇ ಆಫ್ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿವೆ. ಈ ಮಧ್ಯೆ ಕೊನೆಯ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಟೂರ್ನಿಯಿಂದಲೇ ಹೊರಬಿದ್ದಿದೆ.
ಈ ಬಾರಿ ಕಳಪೆ ಪ್ರದರ್ಶನ ನೀಡಿರುವ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ-ಆಫ್‌ಗೆ ಪ್ರವೇಶಿಸುವಲ್ಲಿ ವಿಫಲವಾಗಿದೆ. ಇದರೊಂದಿಗೆ ನಾಯಕ ಮಹೇಂದ್ರ ಸಿಂಗ್ ಧೋನಿ ಮುಂದಿನ ವರ್ಷವೂ ಆಡುತ್ತಾರೆಯೋ ಅಥವಾ ಈ ಸಾಲಿನ ಬಳಿಕ ನಿವೃತ್ತಿ ಘೋಷಿಸಲಿದ್ದಾರೆಯೇ ಎಂಬುದರ ಕುರಿತು ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ಪ್ರಸಕ್ತ ಸಾಲಿನಲ್ಲಿ ಋತುರಾಜ್ ಗಾಯಕವಾಡ್ ಗಾಯಗೊಂಡಿದ್ದರಿಂದ ಧೋನಿ ಮತ್ತೆ ನಾಯಕತ್ವ ವಹಿಸಿದ್ದರು. ಆದರೂ ಚೆನ್ನೈ ತಂಡದ ಅದೃಷ್ಟ ಬದಲಾಗಲಿಲ್ಲ. ಚೆಪಾಕ್‌ನಲ್ಲಿ ಸತತ ಐದನೇ ಸೋಲಿನ ಮುಖಭಂಗಕ್ಕೊಳಗಾಗಿದೆ.
ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ಸಿಎಸ್‌ಕೆ, ಧೋನಿ ನಾಯಕತ್ವದಲ್ಲಿ ಐದು ಬಾರಿ ಟ್ರೋಫಿ ಎತ್ತಿ ಹಿಡಿದಿದೆ. ಆದರೆ ಕಳೆದೆರಡು ಆವೃತ್ತಿಗಳಲ್ಲಿ ಪ್ಲೇ-ಆಫ್ ಪ್ರವೇಶಿಸುವಲ್ಲಿ ವಿಫಲವಾಗಿದೆ.
ಈ ಮಧ್ಯೆ ಮುಂದಿನ ಐಪಿಎಲ್ ಆವೃತ್ತಿಯನ್ನು ಆಡುವ ಬಗ್ಗೆ 43 ವರ್ಷದ ಧೋನಿ ಪ್ರತಿಕ್ರಿಯಿಸಿದ್ದಾರೆ. ಚೆಪಾಕ್‌ನಲ್ಲಿ ಟಾಸ್ ವೇಳೆ ಅಭಿಮಾನಿಗಳಿಂದ ಭಾರಿ ಬೆಂಬಲ ವ್ಯಕ್ತವಾಯಿತು. ಈ ವೇಳೆ ಡ್ಯಾನಿ ಮೊರಿಸನ್, ಇದರ ಅರ್ಥ ಮುಂದಿನ ವರ್ಷವೂ ನೀವು ಬರುತ್ತಿದ್ದೀರಾ ಎಂದು ಧೋನಿ ಅವರಿಗೆ ಪ್ರಶ್ನಿಸಿದರು.
ಇದಕ್ಕೆ ಬಹಳ ಬುದ್ಧಿವಂತಿಕೆಯಿಂದ ಧೋನಿ ಉತ್ತರಿಸಿದ್ದಾರೆ. ನಾನು ಮುಂದಿನ ಪಂದ್ಯ ಆಡುತ್ತೇನೆಯೋ ಎಂಬುದು ಗೊತ್ತಿಲ್ಲ ಎನ್ನುವ ಮೂಲಕ 19ನೇ ಆವೃತ್ತಿಯಲ್ಲಿ ಮತ್ತೆ ಕಣಕ್ಕೆ ಇಳಿದರೂ ಅಚ್ಚರಿಯಿಲ್ಲ ಎಂಬಂತೆ ಉತ್ತರಿಸಿದ್ದಾರೆ. ಇದರಿಂದ ಅಭಿಮಾನಿಗಳು ಮಾತ್ರ ಫುಲ್‌ಖುಷಿಯಾಗಿದ್ದಾರೆ.