ಅಮ್ಮನ ದಿನ - ಮಮತೆಯ ಮಾತೆಯ ಸ್ಮರಿಸೋಣ

ವೇದಾ ಗಿರೀಶ
ಆ ದಿನ ಬಂದೊಡನೆಯೇ ಇಂದು ನಾನು ಅಮ್ಮನಿಗಾಗಿ ಏನು ಮಾಡಬೇಕು? ಆ ದಿನದಂದು ಅವಳನ್ನು ಹೇಗೆ ಸಂತಸಪಡಿಸಬೇಕು, ಅವಳಿಗೆ ಏನು ಕೊಡಬೇಕು ಎಂಬ ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ.

PTI
ಆ ದಿನದಂದು ಮಾತ್ರ ಏಕೆ ಅಂತಹ ಆಲೋಚನೆಗಳು ಮೂಡುತ್ತವೆ? ಪ್ರತಿ ದಿನ ಅಮ್ಮನನ್ನು ಕಾಳಜಿಯಿಂದ ಏಕೆ ನೋಡಬಾರದು? ಎಲ್ಲಾ ದಿನಗಳು ಅಮ್ಮನ ದಿನ ಏಕಾಗಬಾರದು, ಅಲ್ಲವೇ? ಅದೇ ನೋಡಿ, ಅಂದು ಮಾತ್ರ ನಮಗೆ ಅವಳ ಮೇಲೆ ಎಲ್ಲಿಲ್ಲದ ಪ್ರೀತಿ, ಅವಳಿಗೆ ಮೆಚ್ಚುವಂತಹ ಕೊಡುಗೆಗಳು! ಅಬ್ಬಾ ಬೇಡ, ಅಂದು ಅಮ್ಮನನ್ನು, 'ಅಮ್ಮಾ ನೀನು ಏನೂ ಮಾಡಬೇಡ, ಇಂದು ಹಾಯಾಗಿ ಕುಳಿತುಕೋ' ಎಂದು ಮನೆಯಲ್ಲಿ ಮಕ್ಕಳು ಇನ್ನಿಲ್ಲದ ಮಾತುಗಳಿಂದ ಅವಳನ್ನು ಹೊಗಳಿ ಅಟ್ಟಕ್ಕೇರಿಸುತ್ತಾರೆ. ದೂರದಲ್ಲಿರುವ ಮಕ್ಕಳು ಫೋನಿನ ಮೂಲಕ ಅಮ್ಮನಿಗೆ ಶುಭಾಶಯಗಳನ್ನು ತಿಳಿಸುತ್ತಾರೆ. ಈಗ ಹೇಳಿ, ಇಂತಹ ಕಾಳಜಿ ಪ್ರತಿ ದಿನ ಮಕ್ಕಳು ಆ ತಾಯಿಯ ಮೇಲೆ ತೋರಿಸಿದರೆ ಆ ಮಹಾ ತಾಯಿ ಎಷ್ಟು ಸಂತಸ ಪಡುತ್ತಾಳೆ ಗೊತ್ತೆ! ಆಗ ಪ್ರತಿದಿನ ಅಮ್ಮನ ದಿನವೇ ಆಗಿರುತ್ತದೆ. ಅದಕ್ಕೆಂದು ಮೀಸಲಿಡುವ ದಿನವೇ ಆಗಬೇಕಾಗಿಲ್ಲ.

ತುಸು ಹೊತ್ತು ನಮ್ಮ ಬಾಲ್ಯವನ್ನು ನೆನಪಿಸಿಕೊಂಡಾಗ... ಅಮ್ಮನ ಸೆರಗು ಹಿಡಿದು ಅವಳ ಹೆಜ್ಜೆಯನ್ನೇ ಹಿಂಬಾಲಿಸುತ್ತಾ ಅವಳ ನೆರಳಿನಲ್ಲಿಯೇ ಕಾಲ ಕಳೆಯುತ್ತಿರುತ್ತೇವೆ, ಎಲ್ಲಕ್ಕೂ ಅವಳೇ ಇರಬೇಕು. ಅಮ್ಮನಿಲ್ಲದೇ ಒಂದು ಕ್ಷಣವೂ ಬಿಟ್ಟಿರಲಾಗದು. ಆದರೆ ಬೆಳೆಯುತ್ತಾ ಬೆಳೆಯುತ್ತಾ ಅವಳ ಆಸರೆಯಿಂದ ಸ್ವಲ್ಪ ದೂರ ಸರಿದು ನಮ್ಮದೇ ಭಾವನಾಲೋಕದಲ್ಲಿ ಕಾಲ ಕಳೆಯಲು ಇಷ್ಟಪಡುತ್ತೇವೆ. ಹೀಗೆ ಏನೇ ಆದರೂ ಅಮ್ಮ ಎನ್ನುವ ಪದ ನಮ್ಮ ಮನವನ್ನು ರೋಮಾಂಚನಗೊಳಿಸುತ್ತದೆ ಅಲ್ಲವೇ? ಅಕಸ್ಮಾತ್ ನಮಗೇನಾದರು ಆಘಾತ ಅಥವಾ ನೋವುಂಟಾದಾಗ ಅಮ್ಮಾ....! ಎನ್ನುತ್ತೇವೆ ವಿನಃ ಅಪ್ಪಾ, ಅಜ್ಜಿ, ತಾತಾ ಎಂದು ಕರೆಯುವುದಿಲ್ಲ, ಇದು ಸಹಜ.

ಅಂತಾರಾಷ್ಟ್ರೀಯ ಮಾತೃ ದಿನ
ಮೇ 9ರಂದು ಅಂತಾರಾಷ್ಟ್ರೀಯ ಮಾತೃ ದಿನ. ತನ್ನಿಮಿತ್ತ ಈ ಲೇಖನ.
ಅಮ್ಮ, ಒಂದು ಮಗುವಿಗೆ ತಾಯಿಯಾಗಿ, ಗುರುವಾಗಿ ಮತ್ತು ಸ್ನೇಹಿತೆಯಾಗಿ ಆ ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಪಾತ್ರಳಾಗುತ್ತಾಳೆ. ಇಂದು ನಾವಿರುವ ಸ್ಥಿತಿಗೆ ಅವಳ ಆಸರೆ, ಅಕ್ಕರೆ ಮತ್ತು ಪ್ರೋತ್ಸಾಹವೇ ಕಾರಣ. ಅಮ್ಮನಲ್ಲಿ ಎಳ್ಳಷ್ಟೂ ಮತ್ಸರ, ದ್ವೇಷ ಮತ್ತು ಅಸೂಯೆಯಿಲ್ಲದೆ ಪ್ರತಿ ಕ್ಷಣವೂ ತನ್ನ ಮಗುವಿಗಾಗಿ ಹಾತೊರೆಯುತ್ತಾಳೆ. ಇಂತಹ ಅಮೂಲ್ಯವಾದ ಜೀವಕ್ಕೆ ನಾವು ಎಷ್ಟು ಋಣಿಯಾಗಿದ್ದರೂ ಸಾಲದು.

ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ ಎಂಬ ಗಾದೆಯಂತೆ ಯಾವುದೇ ಪದಾರ್ಥಕ್ಕೆ ಉಪ್ಪಿಲ್ಲದಿದ್ದರೆ ಹೇಗೆ ರುಚಿಯಿರುವುದಿಲ್ಲವೊ ಅದೇ ರೀತಿ ತಾಯಿಗಿಂತ ಮಿಗಿಲಾದ ಸ್ನೇಹಿತರು ಹಾಗೂ ಬಾಂಧವ್ಯವಿರುವುದಿಲ್ಲ. ನಾವು ತಾಯಿಗೆ ಸದಾ ಒಂದು ಉನ್ನತ ಸ್ಥಾನವನ್ನು ಕೊಡಬೇಕು, ಅವಳನ್ನು ಗೌರವಿಸಬೇಕು ಹಾಗೂ ಆರಾಧಿಸಬೇಕು. ಎಂದಿಗೂ ಅವಳನ್ನು ನಾವು ನಿಂದಿಸಬಾರದು, ಅವಳ ಮಾತೃ ಹೃದಯಕ್ಕೆ ನೋವನ್ನುಂಟುಮಾಡಬಾರದು.

ಒಂದು ಹೆಣ್ಣಿಗೆ ಮಡದಿ, ಅತ್ತೆ, ಸೊಸೆ, ತಂಗಿ, ಅಕ್ಕ, ಹೀಗೆ ಹಲವಾರು ಸ್ಥಾನಗಳಿಗಿಂತ ತಾಯಿಯ ಸ್ಥಾನ ಅತಿ ಮುಖ್ಯವಾದುದು. ಆ ಸ್ಥಾನಕ್ಕೆ ಎಷ್ಟು ಮಹತ್ವವಿದೆಯೆಂದು ನಾವು ಲೆಕ್ಕಿಸಲು ಸಾಧ್ಯವಿಲ್ಲ. ಅವಳಲ್ಲಿ ವಿಶಾಲವಾದ ಮನೋಭಾವನೆಯಿದೆ, ತ್ಯಾಗಮಯಿ, ಕರುಣಾಮಯಿ ಹಾಗೂ ಕ್ಷಮಯಾಧರಿತ್ರಿ ಅವಳು. ಇಂತಹ ಎಲ್ಲಾ ಗುಣಗಳನ್ನು ನಾವು ಯಾವ ಸಂಬಂಧದಲ್ಲಿಯೂ ಕಾಣಲಾಗುವುದಿಲ್ಲ.

ನಮ್ಮ ಜೀವನದಲ್ಲಾಗುವ ಬದಲಾವಣೆಗಳಿಗೆ ಯಾರ ಹೊಣೆಯೂ ಕಾರಣವಲ್ಲ, ಹಾಗೆಯೇ ಅಮ್ಮನ ಪ್ರೀತಿ ಯಾವ ಸಂಬಂಧಗಳ ಹೋಲಿಕೆಗೂ ಸಲ್ಲದು. 'ಹೆತ್ತವರಿಗೆ ಹೆಗ್ಗಣ ಮುದ್ದು' ಎನ್ನುವ ಹಾಗೆ ಅವಳಲ್ಲಿ ತನ್ನ ಮಗುವಿನ ಅತಿಯಾದ ಕಾಳಜಿ ಕೆಲವೊಮ್ಮೆ ಅನಾಹುತವಾಗಬಹುದೇ ವಿನಃ ಅವಳಲ್ಲಿ ಅಸೂಯೆ, ಸ್ವಾರ್ಥ ಇರುವುದಿಲ್ಲ. ಹೀಗೆ ನಾವು ಅಮ್ಮನ ನಿಜವಾದ ಪ್ರೀತಿಯನ್ನು- ಅವಳ ಕಾತುರತೆಯನ್ನು ಅರ್ಥಮಾಡಿಕೊಂಡು ನಮಗಾಗಿ, ನಮ್ಮ ಒಳಿತಿಗಾಗಿ ಸದಾ ಚಿಂತಿಸುವ ಆ ಮಾತೃ ಹೃದಯಕ್ಕೆ ಸಂತೋಷ ಉಣಿಸುವುದೇ ಮಕ್ಕಳ ಕರ್ತವ್ಯ. ಅಂತಹಾ ಅಮ್ಮನನ್ನು ಎಂದೆಂದಿಗೂ ಸ್ಮರಿಸೋಣ.

ವೆಬ್ದುನಿಯಾವನ್ನು ಓದಿ