ಬೆಂಗಳೂರು: ಕಳೆದ ಕೆಲವು ದಿನಗಳಿಂದ ಅಡಿಕೆ ಬೆಲೆ ಏರಿಕೆಯಾಗದೇ ರೈತರು ನಿರಾಶರಾಗಿದ್ದರು. ಆದರೆ ಇಂದು ಕೆಲವು ವರ್ಗದ ಅಡಿಕೆ ಬೆಲೆ ಏರಿಕೆಯಾಗಿದ್ದು ಬೆಳೆಗಾರರಿಗೆ ಬಂಪರ್ ಆಗಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ.
ಕಳೆದ ಕೆಲವು ದಿನಗಳಿಂದ ಅಡಿಕೆ ಬೆಲೆ ಏರಿಕೆಯೂ ಇಲ್ಲ ಇಳಿಕೆಯೂ ಇಲ್ಲ ಎಂಬ ಸ್ಥಿತಿಯಾಗಿತ್ತು. ಒಂದೆಡೆ ಬೆಳೆ ಕಡಿಮೆ. ಇನ್ನೊಂದೆಡೆ ಬೆಲೆಯೂ ಏರಿಕೆಯಾಗದೇ ರೈತರು ಕಂಗಾಲಾಗಿದ್ದರು. ಆದರೆ ಇಂದು ಅಡಿಕೆ ಬೆಲೆ ಹೆಚ್ಚಳವಾಗಿದ್ದು ಕೊಂಚ ಸಮಾಧಾನಪಡುವಂತಾಗಿದೆ. ಹೊಸ ಅಡಿಕೆ ಬೆಲೆ ನಿನ್ನೆ 475 ರೂ.ಗಳಷ್ಟಿತ್ತು. ಇಂದು 10 ರೂ. ಏರಿಕೆಯಾಗಿದ್ದು 485 ರೂ.ಗೆ ಬಂದು ತಲುಪಿದೆ. ಹಳೆ ಅಡಿಕೆ ಬೆಲೆ ಏರಿಕೆ-ಇಳಿಕೆಯಾಗದೇ ಗರಿಷ್ಠ 520 ರೂ.ಗಳಷ್ಟಿದೆ. ಇನ್ನು ಡಬಲ್ ಚೋಲ್ ಬೆಲೆಯೂ ಯಥಾಸ್ಥಿತಿ ಕಾಪಾಡಿಕೊಂಡಿದ್ದು 520 ರೂ.ಗಳಾಗಿವೆ.
ಹೊಸ ಪಟೋರ ದರ ಮತ್ತು ಹಳೆ ಪಟೋರ ದರ ತಲಾ 365 ರೂ.ಗಳಷ್ಟಿತ್ತು. ಇಂದು ಇವೆರಡರ ಬೆಲೆ ತಲಾ 5 ರೂ.ಗಳಷ್ಟು ಏರಿಕೆಯಾಗಿ 370 ರೂ.ಗಳಾಗಿವೆ. ಹೊಸ ಉಳ್ಳಿ ದರ ಕಳೆದ ಕೆಲವು ದಿನಗಳಿಂದ ಯಥಾಸ್ಥಿತಿಯಲ್ಲಿತ್ತು. ಇಂದೂ ಅದೇ ರೀತಿ ಮುಂದುವರಿದಿದೆ. ಹೊಸ ಉಳ್ಳಿ ಮತ್ತು ಹಳೆ ಉಳ್ಳಿದ ದರ ಈಗ 240 ರೂ.ಗಳಷ್ಟೇ ಇದೆ. ಹೊಸ ಕೋಕ ಮತ್ತು ಹಳೆ ಕೋಕ ದರವೂ ವ್ಯತ್ಯಾಸವಾಗಿರಲಿಲ್ಲ.ಆದರೆ ಇಂದು ತಲಾ 5 ರೂ. ಇಳಿಕೆಯಾಗಿದ್ದು ತಲಾ 305 ರೂ.ಆಗಿದೆ. ಕಾಳುಮೆಣಸು ದರ
ನಿನ್ನೆ ಕಾಳುಮೆಣಸು ದರದಲ್ಲಿಏರಿಕೆಯಾಗದೇ ಇದ್ದರೂ ಇಳಿಕೆಯಾಗಿಲ್ಲ ಎನ್ನುವುದೇ ಸಮಾಧಾನಕರ ವಿಚಾರವಾಗಿತ್ತು. ಆದರೆ ಇಂದು ಕಾಳುಮೆಣಸು ದರದಲ್ಲೂ ಬರೋಬ್ಬರಿ 10 ರೂ.ಗಳಷ್ಟು ಏರಿಕೆಯಾಗಿದ್ದು 650 ರೂ.ಗಳಷ್ಟಿವೆ. ಕೆಲವು ದಿನಗಳ ನಂತರ ಇಂದು ಒಣಕೊಬ್ಬರಿ ಬೆಲೆಯೂ ಏರಿಕೆಯಾಗಿದ್ದು ಗರಿಷ್ಠ 250 ರೂ.ಗಳಾಗಿವೆ.