ಗ್ರಾಹಕರಿಂದ ಸಾಲ ವಸೂಲಿಗೆ ಬೌನ್ಸರ್ ಗಳನ್ನು ನೇಮಿಸಿಕೊಳ್ಳಬಾರದು; ಬ್ಯಾಂಕುಗಳಿಗೆ ಆರ್.ಬಿ.ಐ. ಸೂಚನೆ
ಮಂಗಳವಾರ, 2 ಜುಲೈ 2019 (10:19 IST)
ನವದೆಹಲಿ : ಗ್ರಾಹಕರಿಗೆ ನೀಡಿದ ಸಾಲಗಳನ್ನು ವಸೂಲಿ ಮಾಡಲು ಬ್ಯಾಂಕುಗಳಿಗೆ ಬೌನ್ಸರ್ ಗಳನ್ನು ನೇಮಿಸಿಕೊಳ್ಳುವ ಅಧಿಕಾರವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಸೋಮವಾರದ ಸಂಸತ್ ಕಲಾಪದ ಪ್ರಶ್ನಾವಳಿ ಚರ್ಚೆ ವೇಳೆ ಬ್ಯಾಂಕುಗಳ ಸಾಲ ವಸೂಲಾತಿ ಕುರಿತು ಮಾತನಾಡಿದ ಸಾಂಸ್ಥಿಕ ವ್ಯವಹಾರಗಳ ರಾಜ್ಯ ಖಾತೆ ಸಚಿವ ಅನುರಾಗ್ ಠಾಕೂರ್, ಯಾವುದೇ ಬ್ಯಾಂಕಿನ ಗ್ರಾಹಕರು ಬ್ಯಾಂಕಿನಿಂದ ಸಾಲ ಪಡೆದಿದ್ದರೆ, ಅವರಿಂದ ಒತ್ತಾಯಪೂರ್ವಕವಾಗಿ ಸಾಲ ವಸೂಲಿ ಮಾಡಲು ಗೂಂಡಾಗಳನ್ನು ನೇಮಿಸುವ ಅಧಿಕಾರ ಬ್ಯಾಂಕುಗಳಿಗೆ ಇಲ್ಲ ಎಂದು ಹೇಳಿದ್ದಾರೆ.
ಅಲ್ಲದೇ ಸಾಲಗಾರರೊಂದಿಗೆ ಬ್ಯಾಂಕುಗಳು ನ್ಯಾಯಯುತವಾಗಿ ವರ್ತಿಸಬೇಕು ಎಂಬುದನ್ನು ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದೆ. ಸಾಲ ಪಡೆದವರಿಂದ ಹಣ ವಸೂಲಿ ಮಾಡಲು ಹಿಂಸಾತ್ಮಕ ದಾರಿ ಹಿಡಿಯಬಾರದು, ಮಾನಹಾನಿಯಾಗುವಂತೆ ಅವಮಾನಕಾರಿ ರೀತಿಯಲ್ಲಿ ನಡೆದುಕೊಳ್ಳಬಾರದು. ಒಂದು ವೇಳೆ ಈ ನಿಯಮವನ್ನು ಕಡೆಗಣಿಸಿ ಸಾಲವಸೂಲಿಗಾಗಿ ಹಿಂಸಾ ಮಾರ್ಗಗಳನ್ನು ಅನುಸರಿಸುತ್ತಿರುವ ಬ್ಯಾಂಕುಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಆರ್ ಬಿಐ ಎಚ್ಚರಿಕೆ ನೀಡಿದೆ ಎಂದು ಸಚಿವರು ತಿಳಿಸಿದ್ದಾರೆ.