ಮಂಗಳೂರು: ಹಿಂದೂ ಶ್ರದ್ಧಾ ಕೇಂದ್ರದ ಮೇಲೆ ಅಪಮಾನ, ಅಪಪ್ರಚಾರ ಮಾಡುವುದನ್ನು ಬಿಜೆಪಿ ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಇಡೀ ರಾಜ್ಯ ಮತ್ತು ದೇಶಕ್ಕೆ ನಾಳೆ (ಸೆ.1) ನಡೆಯುವ “ಧರ್ಮಸ್ಥಳ ಚಲೋ” ಸಮಾವೇಶದಲ್ಲಿ ನೀಡಲಿದ್ದೇವೆ ಎಂದು ಸಂಸದ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ತಿಳಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯು ಯಾವಾಗಲೂ ಸನಾತನ ಧರ್ಮದ ಸಂಸ್ಕೃತಿ ಮತ್ತು ಜೊತೆಗೆ ಹಿಂದೂ ಶ್ರದ್ಧಾ ಕೇಂದ್ರಗಳ ಜೊತೆಗೆ, ಹಿಂದೂ ಸಮಾಜದ ಜೊತೆಗೆ ಇದ್ದೇವೆ ಎಂದು ತೋರಿಸುವ ಪ್ರಯತ್ನದಲ್ಲಿ ನಾಳೆÀ “ಧರ್ಮಸ್ಥಳ ಚಲೋ” ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ವಿ. ಸೋಮಣ್ಣ, ಕು. ಶೋಭಾ ಕರಂದ್ಲಾಜೆ, ಬಿಜೆಪಿ ಕರ್ನಾಟಕ ರಾಜ್ಯ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ಬಿಜೆಪಿ ಕೋರ್ ಕಮಿಟಿ ಸದಸ್ಯರು, ಸಂಸದರು, ಶಾಸಕರು, ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಜಿಲ್ಲಾ ಪದಾಧಿಕಾರಿಗಳು ಹಾಗೂ ಲಕ್ಷಾಂತರ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಸಮಸ್ತ ಹಿಂದೂಗಳ ಶ್ರದ್ಧಾ ಕೇಂದ್ರವಾಗಿರುವ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಪುಣ್ಯಕ್ಷೇತ್ರದ ವಿರುದ್ಧ ಹಲವಾರು ಅಪಪ್ರಚಾರಗಳು, ಆರೋಪ ಮಾಡಲಾಗುತ್ತಿದೆ. ಸುಳ್ಳು ಆಪಾದನೆಗಳು, ಯಾವುದೇ ಸಾಕ್ಷ್ಯಾಧಾರವಿಲ್ಲದೆ ಹಿಂದೂ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ತನಿಖೆ ನಡೆಯುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಧರ್ಮಸ್ಥಳ ಚಲೋ ನಡೆಯಲಿದೆ.
ಕ್ಷೇತ್ರದ ಪಾವಿತ್ರ್ಯಕ್ಕೆ ಯಾವುದೇ ಧಕ್ಕೆಯಾಗಬಾರದು, ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯನ್ನು ನಂಬಿಕೊಂಡಿರುವ ಭಕ್ತಾದಿಗಳ ಭಾವನೆಗಳಿಗೆ ಧಕ್ಕೆ ಆಗಬಾರದು, ಹಿಂದೂ ಶ್ರದ್ಧಾ ಕೇಂದ್ರಗಳಿಗೆ ಅಪಪ್ರಚಾರ ಆಗಬಾರದು ಎಂಬ ಉದ್ದೇಶದಿಂದ ಸಮಾವೇಶವನ್ನೂ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬಿಜೆಪಿಯು ಕಾನೂನು, ಸಂವಿಧಾನ ಮತು ಪ್ರಜಾಪ್ರಭುತ್ವ ಮೌಲ್ಯಗಳ ಮೇಲೆ ನಂಬಿಕೆ ಮತ್ತು ಶ್ರದ್ಧೆಯನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಿರುವ ಒಂದು ಪಕ್ಷ. ಧರ್ಮಸ್ಥಳದ ಎಸ್‍ಐಟಿ ತನಿಖೆಯನ್ನು ಬಿಜೆಪಿ ಸ್ವಾಗತಿಸಿತ್ತು. ಆದರೆ ತನಿಖೆ ಯಾವ ರೀತಿ ಹೋಗುತ್ತಿದೆ ಎಂಬ ಸಂಶಯವಿದೆ. ಕಮ್ಯುನಿಸ್ಟರು, ಎಸ್‍ಡಿಪಿಐ, ಮತ್ತು ಪಿಎಫ್‍ಐ ಸಂಘಟನೆಗಳು ಈ ಪ್ರಕರಣದಲ್ಲಿ ಭಾಗಿಯಾಗಿರುವ ಕಾರಣ ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರಕರಣವನ್ನು ಎನ್‍ಐಎಗೆ ವಹಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದರು.
ಷಡ್ಯಂತ್ರ ನಡೆಸಿದವರ ವಿರುದ್ಧ ಕ್ರಮಕ್ಕೆ ತಮ್ಮೇಶ್ ಗೌಡ ಆಗ್ರಹ
ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೆಸಿರುವವರ ಮೇಲೆ ಕ್ರಮ ಕೈಗೊಳ್ಳಿ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ ಅವರು ಆಗ್ರಹಿಸಿದರು.
ಎಸ್‍ಐಟಿ ತನಿಖೆಯ ದಿಕ್ಕು ಸರಿಯಿಲ್ಲ ಎಂದು ಆಕ್ಷೇಪಿಸಿದರು.
ಧರ್ಮಸ್ಥಳ ಪ್ರಕರಣ ಸಂಬಂಧ ಕೇರಳ ರಾಜ್ಯದಲ್ಲಿ, ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ, ಚರ್ಚೆಯಾಗುತ್ತದೆ. ತಮಿಳುನಾಡಿನ ಸಂಸದರು ಕೂಡ ಈ ಪ್ರಕರಣದಲ್ಲಿ ಭಾಗವಹಿಸಿದ್ದಾರೆ ಎಂದು ಮಾಧ್ಯಮಗಳು ತಿಳಿಸುತ್ತಿದೆ. ಎಲ್ಲಾ ಆಯಾಮಗಳ ಹಿನ್ನೆಲೆಯಲ್ಲಿ ಧರ್ಮಸ್ಥಳ ಪ್ರಕರಣವನ್ನು ಎನ್‍ಐಗೆ ವಹಿಸಲು ಅವರು ಆಗ್ರಹಿಸಿದರು.
ರಾಜ್ಯ ಸರ್ಕಾರ ಅನಾಮಿಕ ವ್ಯಕ್ತಿಯ ಪೂರ್ವಪರ ವಿಚಾರಣೆ ನಡೆಸಲಿಲ್ಲ; ಅನಾಮಿಕ ವ್ಯಕ್ತಿ ತಂದು ಕೊಟ್ಟ ಬುರುಡೆಯನ್ನು ತನಿಖೆಗೂ ಮುನ್ನ ಪರಿಶೀಲಿಸಿಲ್ಲ. ನೂರಾರು ಶವ ಹೂತುಹಾಕಿ ಅಪರಾಧ ಮಾಡಿರುವ ವ್ಯಕ್ತಿಯನ್ನು ರಾಜ ಮರ್ಯಾದೆ ನೀಡಿ ನಡೆಸುತ್ತಿರುವ ಎಸ್‍ಐಟಿ ತನಿಖೆಯ ಕುರಿತು ಹಲವಾರು ಸಂಶಯಗಳು ಕಾಣುತ್ತಿವೆ ಎಂದು ಅವರು ಆರೋಪಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತರು ದೇಶಾದ್ಯಾಂತ ಮತ್ತು ರಾಜ್ಯಾದ್ಯಾಂತ ಇದ್ದಾರೆ. ಹಿಂದೂ ಧಾರ್ಮಿಕ ಕ್ಷೇತ್ರದ ಮೇಲೆ ಯಾರೋ ವ್ಯಕ್ತಿಗಳು ಆರೋಪ ಮಾಡಿದಾಗ ಅದನ್ನು ಪರಿಶೀಲಿಸಬೇಕಾಗಿರುವ ಜವಾಬ್ದಾರಿಯನ್ನು ಈ ಸರ್ಕಾರ ಮಾಡಿದೆಯೇ ಎಂದು ಪ್ರಶ್ನಿಸಿದರು. ಧರ್ಮಸ್ಥಳ ಪ್ರಕರಣವು ಎಡಪಂಥೀಯರ, ನಗರ ನಕ್ಸಲರ, ಅಂತರಾಷ್ಟ್ರೀಯ ಮಟ್ಟದ ಏಜೆಂಟ್‍ಗಳ ಮತ್ತು ಸರ್ಕಾರ ಪ್ರಭಾವಿ ವ್ಯಕ್ತಿಗಳ ಪ್ರಭಾವದಿಂದ ಆಗಿದೆಯೋ ಎನ್ನುವುದು ಎನ್‍ಐಎ ತನಿಖೆಯಲ್ಲಿ ತಿಳಿಯಬೇಕಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ವಿಚಾರವಾಗಿ ಯಾರಾದರು ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದರೆ ಅವರ ಮೇಲೆ ಸಂಜೆಯೊಳಗೆ ಎಫ್‍ಐಆರ್ ದಾಖಲಿಸಿ ಬಂಧಿಸುತ್ತಾರೆ. ಒಬ್ಬ ಅನ್ಯ ಧರ್ಮೀಯ ವ್ಯಕ್ತಿ ಹಿಂದೂ ಧರ್ಮದ ದೇವಸ್ಥಾನದ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ನೀಡಿದ್ದಾನೆ. ಅವನಿಗೆ ನೋಟಿಸ್ ನೀಡುವ ನೆಪದಲ್ಲಿ ಅವನ ಮೇಲೆ ಎಫ್‍ಐಆರ್ ಹಾಕಲಾಗಿದೆ. ಹಾಗಿದ್ದಲ್ಲಿ ಸರ್ಕಾರದ ಜವಾಬ್ದಾರಿ ಏನು ಎಂದು ಪ್ರಶ್ನಿಸಿದರು.
ಹಿಂದೂ ಧರ್ಮೀಯ ಇನ್ನೊಂದು ಧರ್ಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದಾಗ ಧಾರ್ಮಿಕ ಗಲಭೆ, ಧಾರ್ಮಿಕ ಪ್ರಚೋದನೆ ಉಂಟಾಗುತ್ತದೆ ಎಂದು ಕೇಸ್ ಹಾಕುತ್ತಾರೆ. ಹಾಗಿದ್ದರೆ, ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿರುವ ಸಮೀರ್ ವ್ಯಕ್ತಿಯ ಮೇಲೆ ಯಾವ ಕಾರಣಕ್ಕೆ ಕ್ರಮ ಕೈಗೊಂಡಿಲ್ಲ ಎಂದು ಕೇಳಿದರು.
ಮಾಜಿ ಸಚಿವ ರೇಣುಕಾಚಾರ್ಯ, ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಅರ್ವಾರ್, ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್, ಬಿಜೆಪಿ ರಾಜ್ಯ ಮಾಧ್ಯಮ ಸಹ ಸಂಚಾಲಕ ಪ್ರಶಾಂತ್ ಕೆಡಂಜಿ, ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ರತನ್ ರಮೇಶ್ ಪೂಜಾರಿ ಅವರು ಉಪಸ್ಥಿತರಿದ್ದರು.