ಬೆಂಗಳೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರಿನ ತೆರಿಗೆದಾರರನ್ನು ಭರಪೂರ ಹೊಗಳಿದ್ದಾರೆ. ಇದಕ್ಕೆ ಕಾರಣವೂ ಇದೆ. ಒಂದೆಡೆ ಕರ್ನಾಟಕಕ್ಕೆ ಕೇಂದ್ರ ತೆರಿಗೆ ಹಂಚಿಕೆ ವಿಚಾರದಲ್ಲಿ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರೆ ಇನ್ನೊಂದೆಡೆ ವಿತ್ತ ಸಚಿವೆ ಬೆಂಗಳೂರಿಗರಿಗೆ ಶಹಬಾಶ್ ಹೇಳಿದ್ದಾರೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಾಗಿ ನಿರ್ಮಿಸಲಾಗುತ್ತಿರುವ ಹೊಂಗಿರಣ ಸಂಕೀರ್ಣಕ್ಕೆ ಶಂಕು ಸ್ಥಾಪನೆ ಕಾರ್ಯ ನೆರವೇರಿಸಿದ ಬಳಿಕ ಮಾತನಾಡಿದ ನಿರ್ಮಲಾ ಸೀತಾರಾಮನ್ ಬೆಂಗಳೂರಿನ ತೆರಿಗೆದಾರರ ಪ್ರಾಮಾಣಿಕತೆಯನ್ನು ಹೊಗಳಿದ್ದಾರೆ.
ವಿಕಸಿತ್ ಭಾರತ್ ನಿರ್ಮಿಸಲು ಬೆಂಗಳೂರಿನ ತೆರಿಗೆದಾರರ ಕೊಡುಗೆ ಅಪಾರ. ಇಲ್ಲಿನ ತೆರಿಗೆದಾರರು ನಮಗೆ ಸಂಪೂರ್ಣವಾಗಿ ಸಹಕಾರ ನೀಡುತ್ತಿದ್ದಾರೆ. ಯಾವತ್ತೂ ಇಲ್ಲಿನ ತೆರಿಗೆದಾರರ ಉತ್ಸಾಹ ಕುಗ್ಗಿಲ್ಲ. ಇಲ್ಲಿನ ವೈಯಕ್ತಿಕ ಮತ್ತು ಕಾರ್ಪೋರೇಟ್ ತೆರಿಗೆದಾರರಿಗೆ ನನ್ನ ಧನ್ಯವಾದಗಳು ಎಂದು ನಿರ್ಮಲಾ ಹೊಗಳಿದ್ದಾರೆ.
ಇನ್ನು, ರಾಜ್ಯ ಸರ್ಕಾರ ಪದೇ ಪದೇ ಕೇಂದ್ರದ ಮೇಲೆ ತೆರಿಗೆ ತಾರತಮ್ಯ ಆರೋಪ ಮಾಡುತ್ತಿರುವುದಕ್ಕೆ ಪರೋಕ್ಷವಾಗಿ ಸಚಿವರು ತಿರುಗೇಟು ನೀಡಿದ್ದಾರೆ. ಕರ್ನಾಟಕ ರಾಜ್ಯದ ಹಣ ಮತ್ತೆ ರಾಜ್ಯಕ್ಕೇ ಹಿಂತಿರುಗುತ್ತಿದೆ. ಇಲ್ಲಿನ ರಸ್ತೆ, ಮೆಟ್ರೋ, ಬಂದರು ನಿರ್ಮಾಣಕ್ಕೇ ಉಪಯೋಗವಾಗುತ್ತಿದೆ ಎಂದಿದ್ದಾರೆ.