ಭಾರತದಲ್ಲಿ ಐಫೋನ್ ಇನ್ನಷ್ಟು ತುಟ್ಟಿ

ಗುರುಮೂರ್ತಿ
ಸೋಮವಾರ, 5 ಫೆಬ್ರವರಿ 2018 (16:51 IST)
ನೀವೇನಾದರೂ ಐಫೋನ್ ಪ್ರಿಯರೇ ಹಾಗಾದರೆ ನಿಮಗೊಂದು ಶಾಕಿಂಗ್ ಸುದ್ದಿ. ಅದೇನೆಂದರೆ ಇಂದಿನಿಂದ ಐಫೋನ್‌ಗಳ ಬೆಲೆಗಳು ಮಾರುಕಟ್ಟೆಯಲ್ಲಿ ಏರಿಕೆಯಾಗಲಿದ್ದು, ಐಫೋನ್ ಕೊಳ್ಳಬೇಕು ಎಂದುಕೊಂಡಿರುವ ಗ್ರಾಹಕರಿಗೆ ಐಫೋನ್ ಇನ್ನಷ್ಟು ತುಟ್ಟಿಯಾಗಲಿವೆ.
ಹೌದು ಕಳೆದ ವಾರದ ನೆಡೆದ ಕೇಂದ್ರದ ಬಜೇಟ್‌ ಮಂಡನೆಯಲ್ಲಿ ಹಣಕಾಸು ಮಂತ್ರಿಯಾಗಿರುವ ಅರುಣ‌ಜೇಟ್ಲಿ ದೇಶದಲ್ಲಿನ ಆಮದು ವಸ್ತುಗಳ ಮೇಲಿನ ಸುಂಕವನ್ನು 15% ರಿಂದ 20% ಕ್ಕೆ ಹೆಚ್ಚಿಗೆ ಮಾಡಿರುವುದು ಐಫೋನ್ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ.
 
ಪ್ರಸ್ತುತವಾಗಿ ಮಾರುಕಟ್ಟೆಯಲ್ಲಿರುವ ಐಫೋನ್ ಮಾದರಿಗಳಾದ iPhone X, iPhone 8, iPhone 8 Plus, iPhone 7, iPhone 7 Plus, iPhone 6, iPhone 6s ಮತ್ತು 6s Plus ಈ ಎಲ್ಲಾ ಮಾದರಿಗಳ ಮೇಲೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಗ್ರಾಹಕರಿಗೆ ಐಫೋನ್ ಕೊಳ್ಳಲು ಇನ್ನಷ್ಟು ಮೊತ್ತವನ್ನು ತೆರುವಂತಾಗಿದೆ. ಮೂಲಗಳ ಪ್ರಕಾರ ಪ್ರತಿ ಫೋನ್‌ನ ಹಿಂದಿನ ಬೆಲೆಗಿಂತ ಇಂದಿನ ದರದಲ್ಲಿ ಸುಮಾರು 1300 ರಿಂದ 1800 ವರೆಗೆ ಹೆಚ್ಚಳವಾಗಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಐಫೋನ್‌ನ ಇನ್ನೊಂದು ಮಾದರಿಯಾದ iPhone SE ನಲ್ಲಿ ಯಾವುದೇ ಬೆಲೆ ಏರಿಕೆಗಳು ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿವೆ.
 
ಆಪಲ್‌ ಸಂಸ್ಥೆಯ ಐಫೋನ್ ಮಾದರಿಗಳ ಮೇಲೆ ಕಳೆದ 3 ತಿಂಗಳುಗಳಲ್ಲಿ ಇದು 2 ನೇ ಬಾರಿಗೆ ದರ ಬದಲಾವಣೆಯಾಗುತ್ತಿದ್ದು ಕಸ್ಟಮ್ಸ್ ಸುಂಕ ಹೆಚ್ಚಳವೇ ಇದಕ್ಕೆ ಮೂಲ ಕಾರಣ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ದುಬಾರಿ ಫೋನ್ ಎಂದೇ ಪ್ರಸಿದ್ಧಿಯಾಗಿರುವ ಐಫೋನ್ ಮುಂದಿನ ದಿನಗಳಲ್ಲಿ ತನ್ನ ಬೆಲೆಯನ್ನು ಇಳಿಸುತ್ತಾ ಎಂಬುದು ಜನರ ನಿರೀಕ್ಷೆ ಆಗಿರುವುದಂತು ಸುಳ್ಳಲ್ಲ.

ಸಂಬಂಧಿಸಿದ ಸುದ್ದಿ

Next Article