ಅಂಚೆ ಇಲಾಖೆಯಲ್ಲಿ ಈ ಯೋಜನೆಯಡಿಯಲ್ಲಿ ಹೂಡಿಕೆ ಮಾಡಿದರೆ ಠೇವಣಿ ಮೊತ್ತ ಡಬಲ್ ಆಗುತ್ತದೆ

Krishnaveni K

ಗುರುವಾರ, 19 ಸೆಪ್ಟಂಬರ್ 2024 (09:31 IST)
Photo Credit: Facebook
ಬೆಂಗಳೂರು: ಅಂಚೆ ಇಲಾಖೆಯಲ್ಲಿ ಅನೇಕ ಜನಪ್ರಿಯ ಯೋಜನೆಗಳಿದ್ದು ಅವುಗಳ ಬಗ್ಗೆ ಹೆಚ್ಚಿನವರಿಗೆ ಮಾಹಿತಿಯೇ ಇರುವುದಿಲ್ಲ. ಆದರೆ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಅಂಚೆ ಇಲಾಖೆಯಲ್ಲಿ ಹೂಡಿಕೆ ಮಾಡುವುದು ಅತ್ಯಂತ ಸೇಫ್ ಕೂಡಾ ಹೌದು. ಅಂಚೆ ಇಲಾಖೆಯಲ್ಲಿ ಈ ಒಂದು ಯೋಜನೆಯಡಿಯಲ್ಲಿ ನೀವು ಹೂಡಿಕೆ ಮಾಡಿದರೆ ಅದರ ಡಬಲ್ ಮೊತ್ತವನ್ನು ನೀವು ಪಡೆಯಬಹುದು. ಆ ಯೋಜನೆಯ ವಿವರ ಇಲ್ಲಿದೆ ನೋಡಿ.

ಅಂಚೆ ಇಲಾಖೆಯ ಜನಪ್ರಿಯ ಯೋಜನೆಗಳಲ್ಲಿ ಕಿಸಾನ್ ವಿಕಾಸ್ ಪಾತ್ರ ಯೋಜನೆಯೂ ಒಂದು. ಹೆಸರು ಕೇಳಿದೊಡನೆ ಇದು ರೈತರಿಗೆ ಮಾತ್ರ ಎಂದುಕೊಳ್ಳಬೇಡಿ. 1988 ರಲ್ಲಿ ಆರಂಭಿಸಲಾದ ಈ ಯೋಜನೆ ಮೊದಲು ರೈತರನ್ನು ಗಮನದಲ್ಲಿಟ್ಟುಕೊಂಡೇ ಮಾಡಲಾಗಿತ್ತು. ಆದರೆ ಈಗ ಎಲ್ಲಾ ವರ್ಗದವರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

ಸಣ್ಣ ಮೊತ್ತದ ಉಳಿತಾಯ ಯೋಜನೆ ಮಾಡುವವರು, ಮಧ್ಯಮ ವರ್ಗದವರಿಗೆ ಈ ಯೋಜನೆ ಸಾಕಷ್ಟು ಪ್ರಯೋಜನವಾಗಲಿದೆ. ಇದಕ್ಕೆ ನೀವು ಭಾರತೀಯ ಪ್ರಜೆಗಳಾಗಿರಬೇಕು. ಅನಿವಾಸಿ ಭಾರತೀಯರಿಗೆ, ವಿದೇಶೀ ಪ್ರಜೆಗಳಿಗೆ ಈ ಹೂಡಿಕೆ ಮಾಡಲು ಅವಕಾಶವಿರಲ್ಲ. ನೀವು ಎಷ್ಟು ಹೂಡಿಕೆ ಮಾಡುತ್ತೀರೋ ಮೆಚ್ಯೂರಿಟಿ ಹಂತ ಬಂದಾಗ ಅದರ ಡಬಲ್ ಮೊತ್ತವನ್ನು ಪಡೆಯಬಹುದಾಗಿದೆ. ಉದಾಹರಣೆಗೆ ನೀವು 5,000 ರೂ. ಹೂಡಿಕೆ ಮಾಡಿದ್ದರೆ ಮೆಚ್ಯೂರಿಟಿಗೆ ಬಂದಾಗ 10,000 ರೂ. ಗಳಿಸಬಹುದಾಗಿದೆ.

ಎಷ್ಟು ವರ್ಷದ ಹೂಡಿಮೆ ಮಾಡಬೇಕು ಮತ್ತು ಮೊತ್ತ ಎಷ್ಟಿರಬೇಕು
9.5 ವರ್ಷ ಅಂದರೆ 115 ತಿಂಗಳು ನೀವು ಹೂಡಿಕೆ ಮಾಡಬೇಕಾಗುತ್ತದೆ. ಅದಾದ ಬಳಿಕ ನಿಮ್ಮ ಮೊತ್ತ ಮೆಚ್ಯೂರಿಟಿಗೆ ಬರುತ್ತದೆ. 1,000 ರೂ. ಕನಿಷ್ಠ ಹೂಡಿಕೆ ಮಾಡಬಹುದಾದ ಮೊತ್ತ. ಗರಿಷ್ಠ ನಿಮ್ಮ ಇಷ್ಟಾನುಸಾರ ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು. 10 ಲಕ್ಷ ರೂ.ಗಳಿಗಿಂತ ಅಧಿಕ ಹೂಡಿಕೆ ಮಾಡುವುದಿದ್ದರೆ ನಿಮ್ಮ ಬ್ಯಾಂಕ್ ವ್ಯವಹಾರದ ವಿವರ, ಸ್ಯಾಲರಿ ಸ್ಲಿಪ್, ಆದಾಯ ತೆರಿಗೆ ಪಾವತಿ ವಿವರ ನೀಡಬೇಕಾಗುತ್ತದೆ. ಇದಲ್ಲದೆ ಈ ಖಾತೆ ಮಾಡಲು ಕಡ್ಡಾಯವಾಗಿ ಆಧಾರ್ ಕಾರ್ಡ್ ಬೇಕಾಗುತ್ತದೆ. 18 ವರ್ಷ ಮೇಲ್ಪಟ್ಟ ಯಾರು ಬೇಕಾದರೂ ಹೂಡಿಕೆ ಮಾಡಬಹುದು. 2024-25 ನೇ ಆರ್ಥಿಕ ಸಾಲಿನ ಪ್ರಕಾರ ಈ ಯೋಜನೆಯಡಿ  ನಿಮ್ಮ ಹೂಡಿಕೆಗೆ 7.5 ಬಡ್ಡಿದರ ಸಿಗುತ್ತದೆ. ಒಂದು ವೇಳೆ ಮಧ್ಯದಲ್ಲೇ ನಿಮಗೆ ವಿತ್ ಡ್ರಾ ಮಾಡಬೇಕೆಂದರೆ ಹೂಡಿಕೆ ಮಾಡಿದ ಬಳಿಕ ಕನಿಷ್ಠ 30 ತಿಂಗಳು ಕಳೆದಿರಬೇಕು.  ಹೆಚ್ಚಿನ ವಿವರಗಳಿಗೆ ನಿಮ್ಮ ಸಮೀಪದ ಅಂಚೆ ಕಚೇರಿಯಲ್ಲಿ ವಿಚಾರಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ