ನವದೆಹಲಿ: ಇಡೀ ದೇಶವೇ ಎದಿರು ನೋಡುತ್ತಿರುವ ಲೋಕಸಭೆ ಚುನಾವಣೆ 2024 ರ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಇಂದು ಷೇರು ಮಾರುಕಟ್ಟೆಯಲ್ಲೂ ಏರಿಳಿತ ಕಂಡುಬರಬಹುದು.
ಮೊನ್ನೆಯಷ್ಟೇ ಎಕ್ಸಿಟ್ ಪೋಲ್ ಫಲಿತಾಂಶ ಹೊರಬಿದ್ದಿತ್ತು. ಈ ವೇಳೆ ಎಲ್ಲಾ ಸಮೀಕ್ಷೆಗಳು ಎನ್ ಡಿಎ ಮತ್ತೆ ಅಧಿಕಾರಕ್ಕೇರಲಿದೆ ಎಂದಿತ್ತು. ಈ ಸಂದರ್ಭದಲ್ಲಿ ಷೇರು ಮಾರುಕಟ್ಟೆಯಲ್ಲೂ ಭಾರೀ ಏರಿಕೆಯಾಗಿತ್ತು. ನಿನ್ನೆಯವರೆಗೂ ಷೇರು ಸೂಚ್ಯಂಕ ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ಇಂದು ಮತ ಎಣಿಕೆ ದಿನ. ಷೇರು ಮಾರುಕಟ್ಟೆಯಲ್ಲೂ ಇದರ ಪರಿಣಾಮ ಖಂಡಿತಾ ಇದ್ದೇ ಇರುತ್ತದೆ. ಇಂದು ಮತ ಎಣಿಕೆ ಕಾರ್ಯವಿದ್ದರೂ ಷೇರು ಮಾರುಕಟ್ಟೆ ಎಂದಿನಂತೇ ಕಾರ್ಯನಿರ್ವಹಿಸಲಿದೆ.
ಈ ನಡುವೆ ಇಂದಿನ ಚುನಾವಣಾ ಫಲಿತಾಂಶ ಷೇರು ಮಾರುಕಟ್ಟೆ ಮೇಲೆ ಫಲಿತಾಂಶ ಬೀರಲಿದೆ. ಎನ್ ಡಿಎ ಮತ್ತೆ ಅಧಿಕಾರಕ್ಕೆ ಬಂದರೆ ಷೇರು ಮಾರುಕಟ್ಟೆ ಏರಿಕೆ ಕಂಡುಬರಬಹುದು. ಇಂಡಿಯಾ ಒಕ್ಕೂಟ ಬಹುಮತ ಸಾಧಿಸಿದರೆ ಅಥವಾ ಅತಂತ್ರ ಫಲಿತಾಂಶವೇನಾದರೂ ಬಂದರೆ ಷೇರು ಮಾರುಕಟ್ಟೆಯಲ್ಲಿ ಇಳಿಕೆ ಕಂಡುಬರಬಹುದು. ಯಾಕೆಂದರೆ ಹೊಸ ಸರ್ಕಾರ ಸ್ಥಿರ ಸರ್ಕಾರವಾಗಬಹುದು ಎಂಬ ವಿಶ್ವಾಸವಿಲ್ಲ. ಇನ್ನೊಂದೆಡೆ ಹೊಸ ಸರ್ಕಾರದ ನಿಯಮಗಳು ಹೇಗಿರುತ್ತವೆ ಎನ್ನುವುದೂ ಗೊತ್ತಿಲ್ಲ. ಹೀಗಾಗಿ ಲೋಕಸಭೆ ಚುನಾವಣೆ ಫಲಿತಾಂಶದ ಜೊತೆಗೆ ಷೇರು ಮಾರುಕಟ್ಟೆಯ ಮೇಲೂ ಇಂದು ಎಲ್ಲರ ಚಿತ್ತವಿರಲಿದೆ.