ಇನ್ನಷ್ಟು ಕಾರುಗಳ ಖರೀದಿಗೆ ನಿಸ್ಸಾನ್ ಜತೆ ಓಲಾ ಒಪ್ಪಂದ

ಬುಧವಾರ, 4 ನವೆಂಬರ್ 2015 (15:51 IST)
ಟ್ಯಾಕ್ಸಿ ಅಗ್ರೆಗೇಟರ್ ಓಲಾ ಗಳಿಸಿದ ಅಪಾರ ಯಶಸ್ಸಿನಿಂದ ಉತ್ತೇಜನಗೊಂಡು ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಇನ್ನಷ್ಟು ಕಾರುಗಳ ಖರೀದಿಗೆ ಮುಂದಾಗಿದೆ.  ಹೊಸ ಚಾಲಕರಿಗೆ ಕಾರುಗಳನ್ನು ಲೀಸ್ ನೀಡುವುದಕ್ಕಾಗಿ ಖರೀದಿಸಲು  ನಿಸಾನ್ ಮೋಟರ್ ಜತೆ ಒಪ್ಪಂದಕ್ಕೆ ಸಹಿ ಹಾಕಿದೆ.  ಸೆಪ್ಟೆಂಬರ್‌ನಲ್ಲಿ ಓಲಾ ಪ್ರತ್ಯೇಕ ಘಟಕ ಓಲಾ ಫ್ಲೀಟ್ ಟೆಕ್ನಾಲಜಿ ಸ್ಥಾಪಿಸಿದೆ. ಕಾರುಗಳ ಖರೀದಿಗೆ 500 ಕೋಟಿ ರೂ. ಆರಂಭಿಕ ಬಂಡವಾಳವನ್ನು ಅದು ಪ್ರಕಟಿಸಿದ್ದು, ಚಾಲಕರಿಗೆ ಲೀಸ್ ನೀಡಲಿದೆ. ತಮ್ಮ ಚಾಲಕರ ಜಾಲವನ್ನು ವಿಸ್ತರಿಸುವ ಮೂಲಕ ಎದುರಾಳಿ ಉಬರ್‌ಗೆ ಮುಖಾಮುಖಿ ಸ್ಪರ್ಧೆ ನೀಡಲು ಓಲಾ ಉದ್ದೇಶಿಸಿದೆ. 
 
ಓಲಾ ಇತ್ತೀಚೆಗೆ ಕ್ಯಾಬ್ ಲೀಸಿಂಗ್ ಕಾರ್ಯಕ್ರಮವನ್ನು ಚಾಲಕ-ಪಾಲುದಾರರಿಗೆ ಆರಂಭಿಸಿದ್ದು, ಅದಕ್ಕಾಗಿ ನಿಸ್ಸಾನ್ ಮತ್ತು ಡ್ಯಾಟ್‌ಸನ್ ಬ್ರಾಂಡ್‌ಗಳಿಂದ ಖರೀದಿಸಲಾಗುತ್ತದೆ.  ಪಾಲುದಾರಿಕೆಯಲ್ಲಿ ಎಷ್ಟು ಸಂಖ್ಯೆಯ ವಾಹನಗಳನ್ನು ಖರೀದಿಸಲಾಗುತ್ತದೆಂಬುದನ್ನು ಓಲಾ ಬಹಿರಂಗ ಮಾಡಲಿಲ್ಲ.  2016ರ ಅಂತ್ಯದಲ್ಲಿ ಕ್ಯಾಬ್ ಲೀಸಿಂಗ್ ಘಟಕದ ಮೂಲಕ ತನ್ನ ವೇದಿಕೆಯಲ್ಲಿ ಒಂದು ಲಕ್ಷ ಕಾರುಗಳನ್ನು ಸೇರ್ಪಡೆ ಮಾಡಲು ಓಲಾ ನಿರ್ಧರಿಸಿದೆ. 
 
ಈ ಪಾಲುದಾರಿಕೆಯ ಮೂಲಕ ಓಲಾ ಸಹಾಯಕ ಸಂಸ್ಥೆ ಓಲಾ ಚಾಲಕ ಪಾಲುದಾರರಿಗೆ ವಾಹನಗಳನ್ನು ಲಭ್ಯವಾಗಿಸಿ ನೂರಾರು ಸಾವಿರ ಜನರಿಗೆ ಉದ್ಯೋಗಾವಕಾಶ ಮತ್ತು ತರುವಾಯ ಉದ್ಯಮಶೀಲ ಅವಕಾಶಗಳನ್ನು ಸೃಷ್ಟಿಸುತ್ತದೆ. 
 

ವೆಬ್ದುನಿಯಾವನ್ನು ಓದಿ