ನವದೆಹಲಿ: ಪಿಪಿಎಪ್, ಸುಕನ್ಯ ಸಮೃದ್ಧಿ ಯೋಜನೆ ಮತ್ತು ಎನ್ಎಸ್ಎಸ್ ಯೋಜನೆಗಳಲ್ಲಿ ಇಂದಿನಿಂದ ಕೆಲವು ಬದಲಾವಣೆಯಾಗುತ್ತಿದ್ದು, ಇದರ ಬಗ್ಗೆ ಇಲ್ಲಿದೆ ಮಾಹಿತಿ.
ಎನ್ಎಸ್ಎಸ್ ಖಾತೆಗಳ ಬದಲಾವಣೆ
ನ್ಯಾಷನಲ್ ಸೇವಿಂಗ್ಸ್ ಸ್ಕೀಮ್ ಅಥವಾ ಎನ್ಎಸ್ಎಸ್ ಖಾತೆಯಲ್ಲಿ ಒಬ್ಬರೇ ವ್ಯಕ್ತಿ ಎರಡು ಖಾತೆಗಳನ್ನು ತೆರೆದಿದ್ದರೆ ಮೊದಲು ತೆರೆದ ಖಾತೆಯನ್ನು ಮಾನ್ಯ ಮಾಡಲಾಗುತ್ತದೆ. ಎರಡನೇ ಖಾತೆಗೆ ಪೋಸ್ಟ್ ಆಫೀಸ್ ಸೇವಿಂಗ್ಸ್ ಖಾತೆಯ ಬಡ್ಡಿದರದ ಪ್ರಕಾರ ಶೇ.2 ರಷ್ಟು ಹೆಚ್ಚುವರಿ ಬಡ್ಡಿ ಕೊಡಲಾಗುತ್ತದೆ. ಒಂದು ವೇಳೆ ಎನ್ಎಸ್ಎಸ್ ಖಾತೆಗೆ ನಿಗದಿ ಮಾಡಿರುವ ವಾರ್ಷಿಕ ಠೇವಣಿ ಮಿತಿ ಮೀರಿ ಹಣವಿದ್ದರೆ ಅದಕ್ಕೆ ಮಿತಿಯೊಳಗಿರುವ ಹಣಕ್ಕೆ ಮಾತ್ರ ಬಡ್ಡಿ ಸಿಗುತ್ತದೆ. ಉಳಿದ ಹಣವನ್ನು ಬಡ್ಡಿರಹಿತವಾಗಿ ಠೇವಣಿದಾರರಿಗೆ ನೀಡಲಾಗುತ್ತದೆ.
ಒಂದಕ್ಕಿಂತ ಹೆಚ್ಚು ಪಿಪಿಎಫ್ ಖಾತೆಗಳ ನಿಯಮ
ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದೇ ಪಿಪಿಎಫ್ ಖಾತೆ ತೆರೆಯಬಹುದಾಗಿದೆ. ಒಂದು ವೇಳೆ ಒಂದಕ್ಕಿಂತ ಹೆಚ್ಚು ಖಾತೆ ತೆರೆದಿದ್ದರೆ ಮೊದಲು ತೆರೆದ ಖಾತೆಗೆ ಮಾತ್ರ ರೆಗ್ಯುಲರ್ ಬಡ್ಡಿದರ ಸಿಗುತ್ತದೆ. ಇತರೆ ಖಾತೆಗಳನ್ನು ಪ್ರೈಮರಿ ಖಾತೆಯೊಂದಿಗೆ ವಿಲೀನ ಮಾಡಲಾಗುತ್ತದೆ. ಅದರಲ್ಲೂ ವಾರ್ಷಿಕ ಹೂಡಿಕೆ ಮಿತಿ ಹಣ ದಾಟಿದ್ದರೆ ನಿಗದಿತ ಹೂಡಿಕೆಗೆ ಮಾತ್ರೆ ರೆಗ್ಯುಲರ್ ಬಡ್ಡಿದರ ಸಿಗಲಿದೆ. ಹೆಚ್ಚುವರಿ ಹಣವನ್ನು ಬಡ್ಡಿರಹಿತವಾಗಿ ಮರಳಿಸಲಾಗುತ್ತದೆ.
ತಂದೆ-ತಾಯಿ ಹೊರತಾಗಿ ಇತರರು ಪಿಪಿಎಫ್ ಖಾತೆ ತೆರೆದಿದ್ದರೆ
ಅಪ್ರಾಪ್ತ ಮಗುವಿನ ಹೆಸರಿನಲ್ಲಿ ತಂದೆ, ತಾಯಿ ಹೊರತಾಗಿ ಅಜ್ಜ, ಅಜ್ಜಿ ಅಥವಾ ಇನ್ಯಾರೇ ಪೋಷಕರು ಪಿಪಿಎಫ್ ಖಾತೆ ತೆರೆಯಲು ಅವಕಾಶವಿದೆ. ಅವರು ಮಗುವಿನ ಪೋಷಕರಾಗಿರುತ್ತಾರೆ. ಅಜ್ಜ-ಅಜ್ಜಿ ನ್ಯಾಚುರಲ್ ಗಾರ್ಡಿಯನ್ ಆಗಿರುವುದಿಲ್ಲ. ಅವರ ಹೆಸರಿನಲ್ಲಿ ಖಾತೆ ತೆರೆದಿದ್ದರೆ ಅದು ಲೀಗಲ್ ಪೋಷಕರಿಗೆ ವರ್ಗಾವಣೆಯಾಗುತ್ತದೆ.