ಪೇಟಿಎಂ ಪೇಮೆಂಟ್ ಬಾಂಕ್ ಗಡುವು ವಿಸ್ತರಣೆ ಮಾಡಿದ ಆರ್ ಬಿಐ: ಇಲ್ಲಿದೆ ಮಾಹಿತಿ

Krishnaveni K

ಶನಿವಾರ, 17 ಫೆಬ್ರವರಿ 2024 (15:13 IST)
Photo Courtesy: Twitter
ನವದೆಹಲಿ: ಪೇಟಿಎಂ ಪೇಮೆಂಟ್ ಬಾಂಕ್ ಕಾರ್ಯಚಟುವಟಿಕೆ ಸ್ಥಗಿತಕ್ಕೆ ಈ ಮೊದಲು ನೀಡಲಾಗಿದ್ದ ಫೆಬ್ರವರಿ 29 ಗಡುವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ವಿಸ್ತರಣೆ ಮಾಡಿದೆ.

ಇದೀಗ ಹೊಸದಾಗಿ ಮಾರ್ಚ್ 15 ರವರೆಗೆ ಗಡುವು ವಿಸ್ತರಣೆ ಮಾಡಲಾಗಿದೆ. ಮಾರ್ಚ್ 15 ರೊಳಗಾಗಿ ಪೇಮೆಂಟ್ ಬ್ಯಾಂಕ್‍ ನ ಚಟುವಟಿಕೆಗಳನ್ನು ಬಂದ್ ಮಾಡಲು ಆರ್ ಬಿಐ ಹೊಸ ಆದೇಶ ಮಾಡಿದೆ. ಈ ಮೊದಲು ನೀಡಲಾಗಿದ್ದ ಫೆಬ್ರವರಿ 29 ರ ಗಡುವು ವಿಸ್ತರಣೆ ಮಾಡುವಂತೆ ಪೇಟಿಎಂ ಮನವಿ ಮಾಡಿತ್ತು. ಅನೇಕ ಗ್ರಾಹಕರಿಗೆ ಇದರಿಂದ ತೊಂದರೆಯಾಗುತ್ತಿದೆ ಎಂದು ಮನವಿ ಮಾಡಿದ್ದರಿಂದ ಗಡುವು ವಿಸ್ತರಣೆ ಮಾಡಲಾಗಿದೆ. ಅನೇಕರು ವೇತನ, ಸರಕಾರೀ ಸಬ್ಸಿಡಿಗಳಿಗೆ ಪೇಟಿಎಂ ಬ್ಯಾಂಕ್ ಖಾತೆಯನ್ನು ಅವಲಂಬಿಸಿದ್ದರು. ಅವರೆಲ್ಲರಿಗೂ ಬದಲಿ ವ್ಯವಸ್ಥೆ ಮಾಡಲು ಸಮಯ ನೀಡಬೇಕು ಎಂದು ಪೇಟಿಎಂ ಮನವಿ ಮಾಡಿತ್ತು.

ಪೇಟಿಎಂ ಬ್ಯಾಂಕ್ ಮೇಲೆ ಆರ್ ಬಿಐ ನಿರ್ಬಂಧಕ್ಕೆ ಕಾರಣವೇನು?
ಪೇಟಿಎಂ ಪೇಮೆಂಟ್ ಬ್ಯಾಂಕ್ ಸೂಕ್ತ ದೃಢೀಕರಣ ದಾಖಲೆಗಳಿಲ್ಲದೇ ನೂರಾರು ಖಾತೆ ಸೃಷ್ಟಿಸಿದ್ದು ಆರ್ ಬಿಐ ನಿರ್ಬಂಧ ಹೇರಲು ಪ್ರಮುಖ ಕಾರಣವಾಗಿದೆ. ಸಮರ್ಪಕ ಕೆವೈಸಿ ಇಲ್ಲದೇ ಕೋಟ್ಯಾಂತರ ರೂಪಾಯಿ ಹಣ ವ್ಯವಹಾರ ನಡೆಯುತ್ತಿತ್ತು. ಇದು ಅಕ್ರಮ ಹಣ ವ್ಯವಹಾರಕ್ಕೆ ದಾರಿಯಾಗಿತ್ತು. ಒಂದೇ ಪ್ಯಾನ್ ಖಾತೆ ನಂಬರ್ ಜೋಡಿಸಿ ಹಲವು ಬಳಕೆದಾರರು ಖಾತೆ ತೆರೆದಿರುವುದೂ ಬೆಳಕಿಗೆ ಬಂದಿತ್ತು. ಕೆಲವು ಖಾತೆಗಳನ್ನು ಅಕ್ರಮ ಹಣವರ್ಗಾವಣೆಗೆ ಬಳಕೆ ಮಾಡಿಕೊಂಡಿರಬಹುದು ಎಂಬ ಅನುಮಾನ ಆರ್ ಬಿಐಗಿದೆ. ಈ ಬಗ್ಗೆ ಈಗಾಗಲೇ ಆರ್ ಬಿಐ ಲೆಕ್ಕ ಪರಿಶೋಧಕರು ತನಿಖೆ ನಡೆಸಿ ಅಕ್ರಮ ಕಂಡಕೊಂಡಿದ್ದಾರೆ. ಹೀಗಾಗಿ ಈ ವರದಿಗಳನ್ನು ಜಾರಿ ನಿರ್ದೇಶನಾಲಯ ಮತ್ತು ಪ್ರಧಾನ ಮಂತ್ರಿ ಕಚೇರಿಗಳಿಗೆ ನೀಡಿದೆ. ಅಕ್ರಮ ಚಟುವಟಿಕೆಯ ಪುರಾವೆ ಕಂಡುಬಂದಲ್ಲಿ ಪೇಟಿಎಂ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆ ಕೈಗೆತ್ತಿಕೊಳ್ಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ