ಪೇಟಿಎಂ ಮೂಲಕ ಪೇಮೆಂಟ್ ಗೆ ಆರ್ ಬಿಐ ನಿಷೇಧ: ವಿವರಗಳಿಗಾಗಿ ಇಲ್ಲಿ ಓದಿ

Krishnaveni K

ಶುಕ್ರವಾರ, 2 ಫೆಬ್ರವರಿ 2024 (09:42 IST)
ನವದೆಹಲಿ: ಇತ್ತೀಚೆಗಿನ ದಿನಗಳಲ್ಲಿ ಯಾವುದೇ ಸಣ್ಣ ಪುಟ್ಟ ಅಂಗಡಿ, ಮಾರುಕಟ್ಟೆಗೆ ಹೋದರೂ ಪೇಟಿಎಂ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಸುಲಭವಾಗಿ ಡಿಜಿಟಲ್ ಪೇಮೆಂಟ್ ಮಾಡಿ ಬಿಡುತ್ತೇವೆ. ಆದರೆ ಇದೀಗ ಪೇಟಿಎಂ ಪೇಮೆಂಟ್ ಗೆ ಆರ್ ಬಿಐ ಶಾಕ್ ನೀಡಿದೆ.

ಫೆಬ್ರವರಿ 29 ರಿಂದ ಜಾರಿಗೆ ಬರುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಪೇಟಿಎಂ ಪಾವತಿಗಳ ಮೇಲೆ ನಿರ್ಬಂಧ ವಿಧಿಸಿದೆ. ಪೇಟಿಎಂ ಪೇಮೆಂಟ್ ಬ್ಯಾಂಕ್ ನಿಯಮಗಳನ್ನು ಅನುಸರಿಸದೇ ಇರುವ ಬಗ್ಗೆ ಆರೋಪಗಳು ಕೇಳಿಬಂದಿರುವ ಹಿನ್ನಲೆಯಲ್ಲಿ ಆರ್ ಬಿಐ ಈ ನಿರ್ಧಾರಕ್ಕೆ ಬಂದಿದೆ. ಆರ್ ಬಿಐ ಸೆಕ್ಷನ್ 35ಎ ಅಡಿಯಲ್ಲಿ ಪೇಟಿಎಂ ಪೇಮೆಂಟ್ ಬ್ಯಾಂಕ್ ಮತ್ತು ಲಿಂಕ್ಡ್ ಸೇವೆಗಳಿಗೆ ಠೇವಣಿ ಅಥವಾ ಟಾಪ್-ಅಪ್ ಗಳನ್ನು ಸ್ವೀಕರಿಸುವುದಕ್ಕೆ ನಿಷೇಧ ಹೇರಿ ಆದೇಶ ಹೊರಡಿಸಿದೆ. ಈ ಆದೇಶ ಕೋಟ್ಯಾಂತರ ಬಳಕೆದಾರರ ಮೇಲೆ ಪರಿಣಾಮ ಬೀರಲಿದೆ.

ಪೇಟಿಎಂ ಷೇರಿನಲ್ಲ ಭಾರೀ ಕುಸಿತ
ಫೆ.29 ರ ನಂತರ ಹೊಸ ಠೇವಣಿ ಸ್ವೀಕರಿಸುವುದಕ್ಕೆ ಮತ್ತು ಕ್ರೆಡಿಟ್ ವ್ಯವಹರಾಗಳನ್ನು ನಡೆಸುವುದಕ್ಕೆ ನಿಷೇಧ ಹೇರಲಾಗಿದೆ. ಆರ್ ಬಿಐ ಇಂತಹದ್ದೊಂದು ಆದೇಶ ಹೊರಡಿಸುತ್ತಿದ್ದಂತೇ ಪೇಟಿಎಂ ಷೇರಿನಲ್ಲಿ ಭಾರೀ ಕುಸಿತ ಕಂಡಿದೆ. ಪೇಟಿಎಂ ಷೇರುಗಳು ಶೇ.20 ರಷ್ಟು ಕುಸಿತ ಕಂಡಿದೆ.

ಆರ್ ಬಿಐ ನಿಷೇಧದ ಬೆನ್ನಲ್ಲೇ ಎಚ್ಚೆತ್ತುಕೊಂಡ ಪೇಟಿಎಂ ಇದೀಗ ನಿರ್ದೇಶನಗಳನ್ನು ಪಾಲಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಕೇಂದ್ರೀಯ ಬ್ಯಾಂಕ್ ಆಕ್ಷೇಪಗಳನ್ನು ಸರಿಪಡಿಸಲು ಆರ್ ಬಿಐನೊಂದಿಗೆ ಕೆಲಸ ಮಾಡುವುದಾಗಿ ಹೇಳಿದೆ.

ಯಾವೆಲ್ಲಾ ಪಾವತಿಗೆ ತೊಂದರೆ?
ಫೆ.29 ರ ನಂತರ ನಿಧಿ ವರ್ಗಾವಣೆಗಳು, ಭಾರತ್ ಬಿಲ್ ಕಾರ್ಯಾಚರಣಾ ಘಟಕ, ಯುಪಿಐ ಸೇವೆಗಳನ್ನು ನಿರ್ಬಂಧಿಸಲಾಗಿದೆ. ಹಾಗಿದ್ದರೂ ಗ್ರಾಹಕರು ಮರುಪಾವತಿಗಳು, ಕ್ಯಾಶ್ ಬ್ಯಾಕ್ ಗಳು, ಬಡ್ಡಿ ಸಾಲಗಳ, ಖಾತೆಯ ಬ್ಯಾಲೆನ್ಸ್ ಹಿಂಪಡೆಯುವಿಕೆ ಅಥವಾ ಬಳಕೆಗೆ ಅರ್ಹರಾಗಿರುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ