ಐದು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ರೂ.50 ಕೋಟಿ

ಗುರುವಾರ, 2 ಫೆಬ್ರವರಿ 2017 (12:40 IST)
ಹಿಂದುಳಿದ ವರ್ಗಗಳಾದ ಉಪ್ಪಾರ, ಮಡಿವಾಳ, ತಿಗಳ, ಸವಿತಾ ಹಾಗೂ ಕಂಬಾರ ಸಮಾಜದವರ ಅಭಿವೃದ್ಧಿಗಾಗಿ ತಲಾ 10 ಕೋಟಿ ರೂ. ಗಳಂತೆ 50 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
 
ಮೈಸೂರಿನ ಜೆ.ಕೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಶ್ರೀ ಮಾಚಿದೇವರ ಜಯಂತ್ಯೋತ್ಸವ ಹಾಗೂ ಬೃಹತ್ ಜಾಗೃತ ಸಮಾವೇಶವನ್ನು ಉದ್ಘಾಟಿಸಿ ಮುಖ್ಯಮಂತ್ರಿಗಳು ಮಾತನಾಡಿದರು. ಅನ್ನಪೂರ್ಣ ಅವರ ವರದಿಯ ಆಧಾರದ ಮೇಲೆ ಮಡಿವಾಳ ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂಬ ಮನವಿ ತಮಗೆ ಬಂದಿದ್ದು, ಈ ಬಗ್ಗೆ ಕ್ಯಾಬಿನೆಟ್ ಸಭೆ ಕರೆದು ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
 
ಜಯಂತಿ ಆಚರಣೆಗೆ ಆದೇಶ: ಮುಂದಿನ ಸಾಲಿನ ಫೆಬ್ರವರಿ 1 ರಿಂದ ಸರ್ಕಾರದ ವತಿಯಿಂದ ಮಾಚಿದೇವರ ಜಯಂತ್ಯೋತ್ಸವವನ್ನು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಆಚರಿಸಲಾಗುವುದು. ಈ ಬಗ್ಗೆ ಸರ್ಕಾರದಿಂದ ಆದೇಶ ಹೊರಡಿಸಲಾಗುವುದು ಎಂದರು.
 
ಬಿಜಾಪುರದಲ್ಲಿರುವ ದೇವರ ಹಿಪ್ಪರಿಗೆ ಕ್ಷೇತ್ರದ ಅಭಿವೃದ್ಧಿಗಾಗಿ ಈಗಾಗಲೇ ಸರ್ಕಾರದಿಂದ 3 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಹಿಂದುಳಿದ ವರ್ಗಗಳು ಶೈಕ್ಷಣಿಕವಾಗಿ ಅಭಿವೃದ್ಧಿಯಾಗಬೇಕು ಇದಕ್ಕಾಗಿ ಹಿಂದುಳಿದ ವರ್ಗದವರ ಶಿಕ್ಷಣಕ್ಕಾಗಿ ಶಿಕ್ಷಣ ಸಂಸ್ಥೆ ಅಥವಾ ಹಾಸ್ಟೆಲ್ ತೆರೆಯಲು ಸರ್ಕಾರದಿಂದ ಸಹಾಯಧನ ಒದಗಿಸಲಾಗುವುದು ಎಂದರು.
ಶೋಷಿತ ವರ್ಗದವರು ಶಿಕ್ಷಣ ಸಂಘಟನೆ, ಹೋರಾಟಗಳ ಮೂಲಕ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಬೆಳೆಯಲು ಸಾಧ್ಯ. ಶೋಷಿತ ವರ್ಗದವರು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಸಂಘಟಿತರಾದಾಗ ತಮ್ಮಲ್ಲಿರುವ ತೊಂದರೆಗಳ ಬಗ್ಗೆ ಚರ್ಚಿಸಿ ಹೋರಾಟ ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
 
ಸಮಾಜದಲ್ಲಿರುವ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಹಲವಾರು ಶಾಂತರು ದಾರ್ಶನಿಕರು, ದಾಸರು ತಮ್ಮ ಭೋದನೆ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ಜಾತಿರಹಿತ ಹಾಗೂ ವರ್ಗರಹಿತ ಸಮಾಜ ನಿರ್ಮಾಣ ಬಾಬಾ ಸಹೇಬ್ ಅಂಬೇಡ್ಕರ್ ಅವರ ಕನಸು. ವೃತ್ತಿಯ ಆಧಾರದ ಮೇಲೆ ಜಾತಿ ಪದ್ಧತಿಯನ್ನು ಜಾರಿಗೆ ತರಲಾಗಿದೆ. ವೃತ್ತಿಯ ಕಾರಣದಿಂದ ಕೆಳವರ್ಗದವರು ಅಕ್ಷರದಿಂದ ವಂಚಿತರಾದರು ಹಾಗೂ ಕೆಳವರ್ಗದವರ ಜನಸಂಖ್ಯೆಯೇ ಹೆಚ್ಚು. ಹಿಂದುಳಿದ ವರ್ಗದವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಸಮಾಜದಲ್ಲಿ ಜಾತಿರಹಿತ, ವರ್ಗರಹಿತ ಸಮ ಸಮಾಜ ನಿರ್ಮಾಣವಾಗಬೇಕು ಎಂದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ