ಸ್ಮಾರ್ಟ್ ಫೋನ್ ಬಳಕೆದಾರರೇ ಎಚ್ಚರ.. ಎಚ್ಚರ..‌.!

ಸೋಮವಾರ, 26 ಡಿಸೆಂಬರ್ 2016 (16:11 IST)
ವಾಷಿಂಗ್ಟನ್: ನೀವು ಸ್ಮಾರ್ಟ್ ಫೋನ್ ಬಳಸುತ್ತಿದ್ದೀರಾ...? ಸರಿಯಾಗಿ ಚಾರ್ಜ್ ಆಗ್ತಾ ಇಲ್ವಾ...? ಬ್ಯಾಟರಿ ಪ್ರಾಬ್ಲಮ್ ಏನಾದರೂ ಇದೆಯಾ...? ಹಾಗಾದರೆ ನಿಮ್ಮ ಆರೋಗ್ಯದ ದೃಷ್ಟಿಯಿಂದ ತಕ್ಷಣ ಎಚ್ಚೆತ್ತುಕೊಳ್ಳುವುದು ಒಳಿತು. ಯಾಕೆಂದರೆ ಸ್ಮಾರ್ಟ್ ಫೋನ್ ಬ್ಯಾಟರಿಗಳು ಆರೋಗ್ಯದ ಮೇಲೆ ವ್ಯತಿಕ್ತ ಪರಿಣಾಮ ಬೀರುವ ವಿಷಾನಿಲ ಬಿಡುಗಡೆ ಮಾಡುತ್ತವೆ ಎನ್ನುವ ಆಘಾತಕಾರಿ ಅಂಶ ಸಂಶೋಧನೆಯೊಂದು ಹೊರಹಾಕಿದೆ.
ಪ್ರಪಂಚದಾದ್ಯಂತ ಕೋಟ್ಯಾಂತರ ಜನರು ಬಳಸುತ್ತಿರುವ ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್ ಗಳು ನೂರಕ್ಕೂ ಹೆಚ್ಚು ಬಗೆಯ ವಿಷಕಾರಿ ಅನಿಲಗಳನ್ನು ಹೊರಹಾಕುತ್ತದೆ ಎಂದು ಸಂಶೋಧನೆ ತಿಳಿಸುತ್ತದೆ. ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್ ಹೆಚ್ಚು ಬಿಸಿಯಾಗುವುದರಿಂದ ಹಾಗೂ ಅವುಗಳನ್ನು ಚಾರ್ಜ್ ಮಾಡಲು ಬಳಸುವ ಕಳಪೆ ಗುಣಮಟ್ಟದ ಚಾರ್ಜರ್ ಗಳಿಂದ ಎದುರಾಗುವ ಅಪಾಯಗಳು ಜನರಿಗೆ ಇನ್ನು ತಿಳಿದಿಲ್ಲ. ಪೂರ್ಣವಾಗಿ ಚಾರ್ಜ್ ಆಗಿರುವ ಬ್ಯಾಟರಿಯು ಶೇ. ೫೦ ರಷ್ಟು ಚಾರ್ಜ್ ಆಗಿರುವ ಬ್ಯಾಟರಿಗಿಂತ ಹೆಚ್ಚಿನ ಪ್ರಮಾಣದ ವಿಷಾನಿಲವನ್ನು ಹೊರಸೂಸುತ್ತದೆ. ಕಳಪೆ ಗುಣಮಟ್ಟದ ಚಾರ್ಜರ್ ನಿಂದ  ಬ್ಯಾಟರಿಯಲ್ಲಿರುವ ಲಿಥಿಯಂ  ರಸಾಯನಿಕ ಸಮರ್ಪಕವಾಗಿ ಕಾರ್ಯ ನಿರ್ವಹಿಸದೆ ಕಾರ್ಬನ್ ಮೊನಾಕ್ಸೈಡ್ ವಿಷಾನಿಲ ಬಿಡುಗಡೆ ಮಾಡುತ್ತದೆ ಎಂದು ಸಂಶೋಧನಾ ಮುಖ್ಯಸ್ಥ ಜೀಸನ್ ತಿಳಿಸಿದ್ದಾರೆ.
 
ಅಮೆರಿಕಾದ ಇನ್ ಸ್ಟಿಟ್ಯೂಟ್ ಆಫ್ ಎನ್.ಬಿ.ಸಿ. ಡಿಫೆನ್ಸ್ ಮತ್ತು ಚೀನಾದ ತ್ಸಿಂಗುವಾ ವಿಶ್ವವಿದ್ಯಾಲಯದ ಸಂಶೋಧಕರು ಸ್ಮಾರ್ಟ್ ಫೋನ್ ಗಳಲ್ಲಿ ಬಳಸುವ ಬ್ಯಾಟರಿಗಳ ಮೇಲೆ ಅಧ್ಯಯನ ನಡೆಸಿ, ಕೆಲವು ಪ್ರಯೋಗಕ್ಕೆ ಒಳಪಡಿಸಿದ್ದರು. ಅವರು ೨೦ ಸಾವಿರ ಲೀಥಿಯಂ ಅಯಾನ್ ಬ್ಯಾಟರಿಗಳನ್ನು ಅದರ ಉರಿಯುವ ಬಿಂದುವಿನವರೆಗೆ ಬಿಸಿ ಮಾಡಿದ್ದಾರೆ. ಆ ವೇಳೆ ಅನೇಕ ಬ್ಯಾಟರಿಗಳು ಸ್ಫೋಟಗೊಂಡಿವೆ. ಅಲ್ಲದೆ, ಮನುಷ್ಯನ ದೇಹದ ಮೇಲೆ ಪರಿಣಾಮ ಬೀರುವ ವಿಷಕಾರಿ ಅನಿಲಗಳು ಹೊರಸೂಸಿದ್ದವು. ಆ ವಿಷಕಾರಿ ಅನಿಲಗಳು ಚರ್ಮ, ಕಣ್ಣು, ಮೂಗು ಹಾಗೂ ದೇಹದ ಸೂಕ್ಷ್ಮ ಅಂಗಾಗಳ ಮೇಲೆ ಕಿರಿಕಿರಿ ಉಂಟು ಮಾಡುತ್ತವೆ ಎನ್ನುವ ಅಂಶ ಬೆಳಕಿಗೆ ಬಂದಿತು. ಜತೆಗೆ ಅದು ಪರಿಸರಕ್ಕೂ ಹಾನಿಕಾರಕ ಎನ್ನುವುದು ದೃಢಪಟ್ಟಿದೆ.

ವೆಬ್ದುನಿಯಾವನ್ನು ಓದಿ