ಬೇಸಿಗೆ ಇಫೆಕ್ಟ್: ಬೆಂಗಳೂರಿನಲ್ಲಿ ಗಗನಕ್ಕೇರಿದ ಎಳೆನೀರು, ನಿಂಬೆ ಹಣ್ಣಿನ ಬೆಲೆ

Krishnaveni K

ಸೋಮವಾರ, 29 ಏಪ್ರಿಲ್ 2024 (11:42 IST)
ಬೆಂಗಳೂರು: ಬೇಸಿಗೆಯ ದಾಹ ತಾಳಲಾರದೇ ರಾಜ್ಯ ರಾಜಧಾನಿಯಲ್ಲಿ ಜನ ಎಳೆನೀರು, ಜ್ಯೂಸ್ ಸೆಂಟರ್ ಗಳ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಇದರ ಬೆನ್ನಲ್ಲೇ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ಸಿಕ್ಕಿದೆ.

ಎಳೆನೀರು, ನಿಂಬೆ ಹಣ್ಣಿನ ಬೆಲೆ ಇದೀಗ ಗಗನಕ್ಕೇರಿದೆ. ಬೇಸಿಗೆ ಆರಂಭಕ್ಕೆ ಮುನ್ನ ಎಳೆ ನೀರಿನ ಬೆಲೆ ಬೆಂಗಳೂರಿನಲ್ಲಿ 40 ರೂ.ವರೆಗಿತ್ತು. ಬೇಸಿಗೆ ಆರಂಭವಾದ ಬಳಿಕ 45 ರೂ.ಗೆ ಏರಿಕೆಯಾಗಿತ್ತು. ಹಾಗಿದ್ದರೂ ಬೇಸಿಗೆಯ ದಾಹ ತಾಳಲಾರದೇ ಜನ ಎಳೆನೀರು ಖರೀದಿ ಮಾಡುತ್ತಿದ್ದರು.

ಕೇವಲ ನೀರು ಮಾತ್ರವಿರುವ ಎಳೆನೀರಿನ ಬೆಲೆ ತೀರಾ ಇತ್ತೀಚೆಗಿನವರೆಗೂ ಹಲವೆಡೆ 40 ರೂ. ಆಗಿತ್ತು. ಆದರೆ ಇದೀಗ ಈ ವಾರದಿಂದ ಬೆಲೆ ದಿಡೀರ್ ಏರಿಕೆಯಾಗಿತ್ತು. 45 ರೂ.ಗಳಿದ್ದ ಎಳೆನೀರಿನ ಬೆಲೆ 50 ರೂ.ಗೆ ಏರಿಕೆಯಾಗಿದೆ. ಈ ಬಗ್ಗೆ ವ್ಯಾಪಾರಿಯೊಬ್ಬರನ್ನು ಕೇಳಿದರೆ ಇತ್ತೀಚೆಗೆ ನಮಗೆ ಕಾಯಿಯೇ ಸಿಗ್ತಾ ಇಲ್ಲ ಏನು ಮಾಡೋಣ ಎನ್ನುತ್ತಿದ್ದಾರೆ.

ಬೆಂಗಳೂರಿಗೆ ಸಾಮಾನ್ಯವಾಗಿ ಮೈಸೂರು, ಮಂಡ್ಯ, ಮದ್ದೂರು ಭಾಗದಿಂದ ಎಳೆನೀರು ಬರುತ್ತದೆ. ಅದೂ ಎರಡು-ಮೂರು ದಿನಕ್ಕೊಮ್ಮೆ ಸ‍ಪ್ಲೈ ಆಗುತ್ತದೆ. ಆದರೆ ಇತ್ತೀಚೆಗೆ ಬೇಡಿಕೆ ಹೆಚ್ಚಾದಂತೆ ಕಾಯಿ ಬರುವುದು ಕಡಿಮೆಯಾಗಿದೆ. ಜೊತೆಗೆ ಬೆಲೆಯೂ ಜಾಸ್ತಿಯಾಗಿದೆ. ವ್ಯಾಪಾರಿಗಳಿಗೆ ಸರಿ ಸುಮಾರು ಒಂದು ಕಾಯಿಗೆ 7 ರೂ.ಗಳಷ್ಟೇ ಲಾಭ ಸಿಗುತ್ತಿದೆ. ಗ್ರಾಹಕರ ಕೈಗೆ 50 ರೂ.ಗೆ ನೀಡಲಾಗುತ್ತಿದೆ.

ಇನ್ನು, ನಿಂಬೆ ಹಣ್ಣಿನ ಕತೆಯೂ ಇದೇ. ಕೆಲವು ಸಮಯದ ಹಿಂದೆ 3 ನಿಂಬೆ ಹಣ್ಣಿಗೆ 10 ರೂ. ಗೆ ಸಿಗುತ್ತಿತ್ತು. ಆದರೆ ಈಗ ಎಳೆಯ ಮತ್ತು ಚಿಕ್ಕ ಗಾತ್ರದ ಒಂದು ನಿಂಬೆ ಹಣ್ಣಿಗೆ 5 ರೂ.ವರೆಗೆ ಬಂದು ತಲುಪಿದೆ. ಬೇಸಿಗೆಯಲ್ಲಿ ನಿಂಬೆ ಪಾನಕ ಮಾಡುವವರ ಸಂಖ್ಯೆ ಹೆಚ್ಚು. ಹೀಗಾಗಿ ನಿಂಬೆಯ ಬೆಲೆಯೂ ಗಗನಕ್ಕೇರಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ