ತಂತ್ರಜ್ಞಾನ ಬಳಕೆಯಿಂದ ದೇಶದಲ್ಲಿ ಪ್ರಯಾಣ ಇನ್ನಷ್ಟು ಸುಲಭ ಮತ್ತು ಸುಖಕರವಾಗಿದೆ. ಪ್ರಯಾಣಿಕರಿಗೆ ಪೋನ್ ಮೂಲಕ ಟಿಕೆಟ್ ರದ್ದುಗೊಳಿಸುವ ಸೇವೆಯನ್ನು ಇಂದು ಭಾರತೀಯ ರೈಲ್ವೆ ಇಲಾಖೆ ಅನಾವರಣಗೊಳಿಸಿದೆ. ಈ ಸೇವೆ ಇಂದಿನಿಂದ ಜಾರಿಗೆ ಬರಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಟಿಕೆಟ್ ಬುಕಿಂಗ್ ಕೌಂಟರ್‌ನಲ್ಲಿ ರೈಲು ಟಿಕೆಟ್ ಬುಕ್ ಮಾಡುವ ಪ್ರಯಾಣಿಕರು, ಟಿಕೆಟ್ ಬುಕಿಂಗ್‌ನಲ್ಲಿ ನೀಡಿರುವ ಅಧಿಕೃತ ದೂರವಾಣಿ ಸಂಖ್ಯೆಯಿಂದ ಒನ್ ಟೈಮ್ ಪಾಸ್ವರ್ಡ್ ದೃಢಪಡಿಸುವ ಮೂಲಕ 139 ಸಹಾಯವಾಣಿ ಬಳಸಿಕೊಂಡು ತಮ್ಮ ಟಿಕೆಟ್‌ನ್ನು ರದ್ದುಗೊಳಿಸಬಹುದಾಗಿದೆ.
ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಇಂದು ಪೋನ್ ಮೂಲಕ ಟಿಕೆಟ್ ರದ್ದುಗೊಳಿಸುವ ಸೇವೆಯನ್ನು ಅನಾವರಣಗೊಳಿಸಿದರು. ಜೊತೆಗೆ ಅಂತಾರಾಷ್ಟ್ರೀಯ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಇ-ಟಿಕೆಟ್ ಬುಕಿಂಗ್ ಸೇವೆಯನ್ನು ಸಹ ಅನಾವರಣಗೊಳಿಸಿದರು.
ರಾತ್ರಿ 11 ಗಂಟೆಯಿಂದ ಮುಂಜಾನೆ 6 ಗಂಟೆಗೆ ನಿರ್ಗಮನವಾಗುವ ರೈಲುಗಳನ್ನು ಮಾತ್ರ 139 ಸಹಾಯವಾಣಿಯನ್ನು ಬಳಸಿಕೊಂಡು ದೃಢಪಟ್ಟಿರುವ ರೈಲು ಟಿಕೆಟ್‌ನ್ನು ರದ್ದುಗೊಳಿಸಬಹುದಾಗಿದೆ. ರದ್ದುಗೊಂಡಿರುವ ಟಿಕೆಟ್‌ನ ಶುಲ್ಕವನ್ನು ಮಾರನೇಯ ದಿನ 10 ಗಂಟೆಯ ಒಳಗಡೆ ಹತ್ತಿರದ ರೈಲ್ವೆ ಟಿಕೆಟ್ ಕೌಂಟರ್‌ನಲ್ಲಿ ಪಡೆಯಬಹುದಾಗಿದೆ.