ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಹೊಸ ಪ್ರತಿಭೆ ಸೇರ್ಪಡೆಯಾಗಿದೆ. ಸುಮಾ ಶಾಸ್ತ್ತ್ರಿ ಹೆಸರಿನ ಸಂಗೀತ ನಿರ್ದೇಶಕಿ ಗಾಂಧಿನಗರಕ್ಕೆ ಎಂಟ್ರಿಕೊಟ್ಟಿದ್ದಾರೆ. ಈಕೆ ಏನು ಚಿತ್ರರಂಗಕ್ಕೆ ಹೊಸಬರಲ್ಲ. ಹೆಸರಾಂತ ಸಂಗೀತ ನಿರ್ದೇಶಕ ಹಾಗೂ ಗಾಯಕ ಎಲ್.ಎನ್.ಶಾಸ್ತ್ತ್ರಿ ಅವರ ಪತ್ನಿ ಸುಮಾ ಶಾಸ್ತ್ತ್ರಿ. ಹಾಡುಗಾರ್ತಿಯಾಗಿದ್ದ ಈಕೆ ಒಂದು ಹೆಜ್ಜೆ ಮುಂದೆ ಇಟ್ಟು ಸಂಗೀತ ನಿರ್ದೇಶಕಿಯಾಗಿದ್ದಾರೆ.
ಇದೀಗ ಸುಮಾ ದಿನೇಶ್ ಬಾಬು ನಿರ್ದೇಶನ ಮಾಡುತ್ತಿರುವ ಮೂರು ಗುಟ್ಟು, ಒಂದು ಸುಳ್ಳು, ಒಂದು ಸತ್ಯ ಚಿತ್ರಕ್ಕೆ ಸಂಗೀತ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಈಕೆ ಹಂಸಲೇಖ, ವಿ ಮನೋಹರ್ ಕೆ ಕಲ್ಯಾಣ್ ಹಾಗೂ ಇನ್ನೂ ಕೆಲವರಿಗೆ ಟ್ರಾಕ್ ಗಾಯಕಿಯಾಗಿ ಕೆಲಸ ಮಾಡಿದ್ದಾರೆ. ಅಲ್ಲಿ ರಾಮಾಚಾರಿ ಇಲ್ಲಿ ಬ್ರಹ್ಮಚಾರಿ ಚಿತ್ರದ ಮೂಲಕ ಗಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಈಕೆ ಸಿಂಹದ ಮರಿ, ಅಹಂ ಪ್ರೇಮಾಸ್ಮಿ ಮತ್ತು ಜಂಗ್ಲಿ ಚಿತ್ರಗಳಲ್ಲಿ ಹಾಡಿದ್ದಾರೆ.
ಸುಮಾ ಐದಾರು ವರ್ಷಗಳ ಕಾಲ ನಟ, ನಿರ್ದೇಶಕರಾದ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರೊಂದಿಗೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ ಅನುಭವ ಇದೆ. ಮತ್ತೊಂದು ವಿಶೇಷ ಏನೆಂದರೆ ಸುಮಾ ನಿರ್ದೇಶನ ಮಾಡುತ್ತಿರುವ ಮೂರು ಗುಟ್ಟು ಒಂದು ಸುಳ್ಳು ಒಂದು ಸತ್ಯ ಚಿತ್ರದಲ್ಲಿ ಇರುವುದು ಒಂದೇ ಹಾಡಂತೆ. ಈ ಚಿತ್ರಕ್ಕೆ ಮೊದಲ ಬಾರಿ ಸಂಗೀತ ನಿರ್ದೇಶಕಿಯಾಗಿರುವುದಕ್ಕೆ ಸುಮಾಗೆ ಸಂತಸ ಆಗಿದೆಯಂತೆ. ಏನೇ ಇರಲಿ ಇವರ ಈ ಮೊದಲ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಅಂತ ಹಾರೈಸೋಣ.