ಎಕ್ಸ್ ಕ್ಲೂಸಿವ್: ಆರ್ಯವರ್ಧನ ಕಣ್ಣಲ್ಲಿ ವಿಷ್ಣುವರ್ಧನ್: ನಟ ಅನಿರುದ್ಧ್ ಸಂದರ್ಶನ

ಶುಕ್ರವಾರ, 18 ಸೆಪ್ಟಂಬರ್ 2020 (09:49 IST)
ಸಂದರ್ಶನ: ಕೃಷ್ಣವೇಣಿ ಕೆ.
ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಇಂದು 70 ನೇ ಜನ್ಮದಿನ. ಸಹಸ್ರಾರು ಅಭಿಮಾನಿಗಳ ಎದೆಯಲ್ಲಿ ಸದಾ ವಿಷ್ಣು ದಾದನಾಗಿ ಮೆರೆದ ಸಾಹಸಸಿಂಹನ ಬಗ್ಗೆ ಅವರ ಅಳಿಯ, ನಟ ಅನಿರುದ್ಧ್ ವೆಬ್ ದುನಿಯಾ ಜತೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ್ದಾರೆ.


· ಈ ಬಾರಿಯ ವಿಷ್ಣುದಾದ ಬರ್ತ್ ಡೇ ಹೇಗೆ ಸ್ಪೆಷಲ್? ಮೈಸೂರಿನಲ್ಲಿ ನಿರ್ಮಾಣವಾಗುತ್ತಿರುವ ಸ್ಮಾರಕದಲ್ಲಿ ಏನು ವಿಶೇಷತೆಯಿರುತ್ತದೆ?

ಅವರ ಜನ್ಮದಿನದ ಸಂದರ್ಭದಲ್ಲಿ ಸ್ಮಾರಕ ನಿರ್ಮಾಣವಾಗುತ್ತಿದೆ ಎನ್ನುವುದೇ ಸ್ಪೆಷಲ್. ನಾವೆಲ್ಲಾ ಇಷ್ಟು ವರ್ಷ ಸಾಕಷ್ಟು ಪರಿಶ್ರಮ ಪಟ್ಟಿದ್ದೇವೆ. ಅದೀಗ ನನಸಾಗುತ್ತಿದೆ. ರಾಜ್ಯ ಸರ್ಕಾರ ನಮಗೆ ಒಟ್ಟು ಐದೂವರೆ ಎಕರೆ ಭೂಮಿ ಒದಗಿಸಿದೆ. ಇದರಲ್ಲಿ ಎರಡು ಎಕರೆ ಸ್ಮಾರಕ ನಿರ್ಮಾಣವಾಗಲಿದೆ. ಸ್ಮಾರಕದಲ್ಲಿ ಅಪ್ಪಾವ್ರ ವಿಭೂತಿ ಪ್ರತಿಷ್ಠಾಪನೆ, ಆರು ಅಡಿಗಳ ಪ್ರತಿಮೆ, ಕಡಗದ ಪ್ರತಿರೂಪ ಕೂಡಾ ನಿರ್ಮಾಣವಾಗಲಿದೆ. ನಾಟಕೋತ್ಸವ, ಚಿತ್ರೋತ್ಸವಗಳನ್ನು ಆಯೋಜಿಸಲು, ರಂಗಭೂಮಿ, ಸಿನಿಮಾ ರಿಲೇಟೆಡ್ ಕಾರ್ಯಕ್ರಮ ಆಯೋಜಿಸಲು ಅಡಿಟೋರಿಯಂ ನಿರ್ಮಾಣವಾಗಲಿದೆ. ಉಳಿದ ಜಾಗದಲ್ಲಿ ಫಿಲಂ ಇನ್ಸ್ಟಿಟ್ಯೂಷನ್ ಆಫ್ ಪುಣೆಯ ಒಂದು ಶಾಖೆಯನ್ನು ಇಲ್ಲಿ ತೆರೆಯಬೇಕು ಎಂದು ಕನಸಿದೆ.

· ಈ ಬಾರಿ ವಿಷ್ಣು ದಾದ ಬರ್ತ್ ಡೇಯನ್ನು ಹೇಗೆ ಆಚರಿಸಿಕೊಳ್ತೀರಿ? ಅಭಿಮಾನಿಗಳಿಗೆ ಏನು ಹೇಳ್ತೀರಿ?

ಕೊರೋನಾ ಕಾರಣದಿಂದ ಪ್ರತೀ ವರ್ಷದ ಹಾಗೆ ಆಚರಿಸಲು ಸಾಧ‍್ಯವಾಗಲ್ಲ. ಮೊನ್ನೆ ಸ್ಮಾರಕ ನಿರ್ಮಾಣ ಭೂಮಿ ಪೂಜೆ ದಿನವೂ ಅಭಿಮಾನಿಗಳಿಗೆ ಮನವಿ ಮಾಡಿದ್ದೆವು. ಗುಂಪು ಸೇರೋದು ಎಲ್ಲಾ ಸರಿಯಲ್ಲ ಎನ್ನುವ ಕಾರಣಕ್ಕೆ ಆ ರೀತಿ ಆಚರಣೆ ಇರಲ್ಲ. ನಾವು ಮನೆಯಲ್ಲೇ ಪೂಜೆ ಮಾಡಿ ಸರಳವಾಗಿ ಆಚರಣೆ ಮಾಡ್ತೀವಿ. ಅಭಿಮಾನಿಗಳೂ ನಮ್ಮ ಮನೆಯವರೇ. ಅವರು ನಮ್ಮ ಬೃಹತ್ ಕುಟುಂಬ. ಅವರು ನಮ್ಮ ಜತೆಗೇ ಯಾವತ್ತೂ ಬೆನ್ನುಲುಬಾಗಿಯೇ ಇರುತ್ತಾರೆ.

· ವಿಷ್ಣುದಾದ ಬಗ್ಗೆ ನಿಮ್ಮ ಮಾತುಗಳಲ್ಲಿ ಹೇಳುವುದಾದರೆ?

ನಾನು ಅವರನ್ನು ಒಬ್ಬ ಕಲಾವಿದನಾಗಿ ಹೇಳುವುದಾದರೆ ಅವರು ತಮ್ಮ ವೃತ್ತಿ ಜೀವನದ ಜತೆಗೆ ಆಧ‍್ಯಾತ್ಮದ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದರು. ಶೂಟಿಂಗ್ ಸಂದರ್ಭಗಳಲ್ಲೂ ಒಂದು ಕಡೆ ಆದ್ಯಾತ್ಮದ ಪುಸ್ತಕ ಓದೋದು, ಕ್ಯಾಸೆಟ್ ಕೇಳೋದು ಮಾಡ್ತಾನೇ ಶೂಟಿಂಗ್ ಕಡೆಗೂ ಗಮನ ಕೊಡ್ತಾ ಇದ್ರು. ಆದ್ರೆ ವಿಶೇಷ ಎಂದರೆ ಸ್ಕ್ರಿಪ್ಟ್ ನ್ನು ಅದ್ಯಾವಾಗ ಓದಿಕೊಳ್ತಾ ಇದ್ರೋ ಗೊತ್ತಿಲ್ಲ, ಪುಟಗಟ್ಟಲೆ ಸಂಭಾಷಣೆಯನ್ನು ಒಂದೇ ಟೇಕ್ ನಲ್ಲಿ ಮಾಡ್ತಾ ಇದ್ರು. ಪ್ರತಿಯೊಂದು ಪಾತ್ರಕ್ಕೂ ಸಾಕಷ್ಟು ಪೂರ್ವತಯಾರಿ ಮಾಡಿಕೊಳ್ತಾ ಇದ್ರು. ಆಪ್ತಮಿತ್ರ, ಆಪ್ತರಕ್ಷಕ ಸಿನಿಮಾಗಳಲ್ಲಿ ಎರಡು, ಮೂರು ಪಾತ್ರ ಮಾಡಿದ್ದರು. ಅದಕ್ಕೆಲ್ಲಾ ಸಾಕಷ್ಟು ಪೂರ್ವ ತಯಾರಿ ಮಾಡ್ತಾ ಇದ್ರು. ಬೆಳಿಗ್ಗೆಯೇ ಎದ್ದು ಪ್ರತಿನಿತ್ಯ ಯೋಗಾಸನ, ಪ್ರಾಣಾಯಾಮ, ಧ್ಯಾನ ತುಂಬಾನೇ ಮಾಡ್ತಾ ಇದ್ರು. ಫಿಟ್ನೆಸ್ ಗೆ ಹೆಚ್ಚು ಒತ್ತು ಕೊಡುತ್ತಿದ್ದರು. ದೇಹದ ಜತೆಗೆ ಮನಸ್ಸೂ ಚುರುಕಾಗಿರಬೇಕು ಎಂಬುದು ಅವರ ನಿಲುವಾಗಿತ್ತು. ಟೆನಿಸ್ ಆಡೋದು, ಪದಬಂಧ ಬಿಡಿಸೋದು ಎಲ್ಲಾ ಅವರಿಗೆ ತುಂಬಾ ಇಷ್ಟ.

·  ವಿಷ್ಣುವರ್ಧನ್ ಎಂದರೆ ಆಂಗ್ರಿ ಯಂಗ್ ಮ್ಯಾನ್ ಇಮೇಜ್ ಇತ್ತು ಸಿನಿಮಾಗಳಲ್ಲಿ. ಮನೆಯಲ್ಲಿ ಯಾವತ್ತಾದ್ರೂ ತಾಳ್ಮೆ ಕಳೆದುಕೊಳ್ಳುವ ಸಂದರ್ಭಗಳು ಎದುರಾಗಿತ್ತಾ?

ಇಲ್ಲ. ಅವರು ತುಂಬಾ ಸೂಕ್ಷ್ಮ. ಸಿನಿಮಾಗಳಲ್ಲಿ ಏನೇ ಆಗಿದ್ದರೂ ಮನೆಗೆ ಬಂದ ಮೇಲೆ ತುಂಬಾ ಮೃದು ಹೃದಯಿ. ನಮಗೆಲ್ಲಾ ಅಪ್ಪ ಆಗಿದ್ದರು. ಮೊಮ್ಮಕ್ಕಳಿಗೆ ತಾತ ಆಗಿಯೇ ಇರ್ತಾ ಇದ್ರು. ಮನೆಗೆ ಬಂದು ನೋಡಿದರೆ ಇವರೇನಾ ಸಾಹಸಸಿಂಹ ಎಂದು ಪ್ರಶ್ನೆ ಮಾಡಬಹುದು. ಆ ರೀತಿ ಇರ್ತಾ ಇದ್ರು. ಅವರಿಗೆ ಜಾತಿ ಧರ್ಮ ಎಂಬ ಬೇಧವಿರಲಿಲ್ಲ. ಎಷ್ಟೋ ಜನಕ್ಕೆ ಹಜ್ ಯಾತ್ರೆ ಮಾಡಿಸಿದ್ದಾರೆ. ಎಷ್ಟೋ ಜನಕ್ಕೆ ಚಿಕಿತ್ಸೆಗಾಗಿ, ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ. ಆದರೆ ಒಂದು ಕವರ್ ನಲ್ಲಿ ದುಡ್ಡು ಹಾಕಿ ಕೊಡ್ತಾ ಇದ್ರು. ಆದರೆ ಕೊಡುವಾಗ ಯಾರು ಕೊಟ್ಟಿದ್ದು ಎಂದು ಹೇಳಬೇಡಿ ಅಂತಾ ಇದ್ರು.

· ನಿಮ್ಮಲ್ಲೂ, ನಿಮ್ಮ ಅಭಿನಯದಲ್ಲೂ ವಿಷ್ಣುದಾದನ ಕಾಣ್ತಿದ್ದೀವಿ ಅಂತ ಜನ ಈಗ ಹೇಳ್ತಿರ್ತಾರೆ. ನಿಮಗೆ ಆಗ ಏನನಿಸುತ್ತದೆ?

ಅದು ನನ್ನ ಅದೃಷ್ಟ ಅಂದುಕೊಳ್ತೀನಿ. ಯಾಕೆಂದರೆ ಅವರೇ ನನ್ನೊಳಗೆ ಇದ್ದು ನನ್ನಿಂದ ಇದೆಲ್ಲಾ ಮಾಡಿಸ್ತಾ ಇದ್ದಾರೆ ಅನಿಸುತ್ತೆ. ಕೆಲವೊಮ್ಮೆ ನಮ್ಮ ಅಭಿನಯವನ್ನು ಟಿವಿಯಲ್ಲಿ ನೋಡುವಾಗ ನಾನು ಇದನ್ನು ಮಾಡಿದ್ದೀನಾ ಅನಿಸುತ್ತೆ ನನಗೆ. ಅವರೇ ಇದೆಲ್ಲಾ ಮಾಡಿಸ್ತಾರೆ ಎನಿಸುತ್ತೆ. ಜನರ ಜತೆಗೆ ಈ ಮಟ್ಟಿಗೆ ಕನೆಕ್ಟಿವಿಟಿ ಇದೆಯಲ್ಲಾ ಅದೆಲ್ಲವೂ ಅವರಿಂದಲೇ ಆಗುತ್ತಿರೋದು ಅಂತ ನಂಬಿದ್ದೇನೆ.

·  ನಿಮ್ಮ ಈಗಿನ ಯಶಸ್ಸನ್ನು ವಿಷ್ಣು ದಾದ ನೋಡಿದ್ದಿದ್ದರೆ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಿದ್ದರು?

ನಾನು ಯಾವತ್ತೂ ಅವರು ನಮ್ಮೊಳಗೇ ಬದುಕಿದ್ದಾರೆ ಅಂತಾನೇ ನಂಬಿದ್ದೇನೆ. ಅವರಿಗೆ ತುಂಬಾ ಪೊಸೆಸಿವ್ ನೆಸ್ ಇತ್ತು. ನನ್ನ ಸಿನಿಮಾ ಇರಲಿ, ನನ್ನ ಹಾಡು ಇರಲಿ, ಯಾವುದೇ ಇದ್ದರೂ ನೋಡಿ ನಮ್ಮ ಅನಿ ಮಾಡಿದ್ದಾನೆ ಅಂತ ಫೋನ್ ಮಾಡಿ ಎಲ್ಲರಿಗೂ ನೋಡಕ್ಕೆ ಹೇಳ್ತಾ ಇದ್ರು. ಒಂದು ಸರ್ತಿ ಸೆಟ್ ನಲ್ಲಿ ಸಾಹಸ ದೃಶ್ಯ ನಾನು ಚೆನ್ನಾಗಿ ಮಾಡಿದಾಗ ಜೋರಾಗಿ ಚಪ್ಪಾಳೆ ತಟ್ಟಿ ಖುಷಿ ಪಟ್ರು. ಅವರಲ್ಲಿ ಮಾತೃಹೃದಯವಿತ್ತು, ಒಬ್ಬ ತಂದೆಯಾಗಿ ನಮ್ಮ ಮಕ್ಕಳಿಗೆ ಚೆನ್ನಾಗಿ ಆಗ್ಬೇಕು ಅಂತ ಹೇಳ್ತಾನೇ ಇದ್ರು.

·   ಮುಂದೆ ವಿಷ್ಣುವರ್ಧನ್ ಕುಟುಂಬದ ಕುಡಿ, ನಿಮ್ಮ ಮಗ ಜ್ಯೇಷ್ಠವರ್ಧನ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಬಹುದಾ?

ನಿಮ್ಮೆಲ್ಲರ ಆಶೀರ್ವಾದ ಇದ್ದರೆ ಖಂಡಿತಾ ಆಗುತ್ತೆ. ಅವರಿಗೆ ಆಸಕ್ತಿಯಿದೆ. ನಾಟಕ, ನೃತ್ಯಗಳಲ್ಲಿ ಒಲವಿದೆ. ಚೆನ್ನಾಗಿ ಬರೀತಾರೆ ಕೂಡಾ. ಹಾಗಾಗಿ ಆರ್ಟ್ಸ್ ವಿಷಯದಲ್ಲೇ ಕಲಿಯಲು ನಿರ್ಧರಿಸಿದ್ದಾರೆ. ಕಲಾಕ್ಷೇತ್ರದಲ್ಲೇ ಮುಂದುವರಿಯಬೇಕು ಎನ್ನುವುದು ನಮ್ಮ ಆಸೆ ಮತ್ತು ಅವರ ಆಸೆ ಕೂಡಾ.

· ನಿಮಗೆ ಆಪ್ತ ಎನಿಸೋದು ಕಿರುತೆರೆನಾ? ಇಲ್ಲಾ ಸಿನಿಮಾನಾ?

ನಾನು ರಂಗಭೂಮಿಯಲ್ಲೂ ಮಾಡಿದ್ದೇನೆ. ಆದರೆ ಕಿರುತೆರೆಯಲ್ಲಿ ಏನು ಲಾಭ ಎಂದರೆ ಅಲ್ಲಿ ಮನೆ ಮನೆಗೂ ತಲುಪುತ್ತೇನೆ. ವಿವಿಧ ಆಯಾಮಗಳಲ್ಲಿ ಒಂದು ಪಾತ್ರವನ್ನು ತೋರಿಸುತ್ತಾರೆ. ಹಾಗಾಗಿ ಜನರಿಗೆ ಮನೆ ಮಗನೇ ಆಗಿರುತ್ತೇವೆ. ಸಿನಿಮಾಗಳಲ್ಲಿ ಸೀಮಿತ ವೀಕ್ಷಕರನ್ನೂ ಮಾತ್ರ ತಲುಪಬಹುದು.

· ಜೊತೆ ಜೊತೆಯಲಿ ಧಾರವಾಹಿ ಬಗ್ಗೆ ಅಭಿಮಾನಿಗಳಿಂದ ನಿಮಗಾದ ವಿಶೇಷ ಅನುಭವ ಏನು?

ನನಗೆ ಖುಷಿ ಎಂದರೆ ಈ ಧಾರವಾಹಿಯನ್ನು ನೋಡಿ ಬೇರೆ ರಾಜ್ಯ, ದೇಶ, ಭಾಷೆಯವರೂ ಪ್ರತಿಕ್ರಿಯಿಸಿದ್ದಾರೆ. ಜಮ್ಮು ಕಾಶ್ಮೀರದಿಂದಲೂ ನನಗೆ ಸಂದೇಶ ಬರೆದು ನಮಗೆ ಭಾಷೆ ಬರದಿದ್ದರೂ ನಿಮ್ಮ ಧಾರವಾಹಿ ಮೂಲಕ ಕನ್ನಡ ಕಲಿಯುತ್ತಿದ್ದೇವೆ ಎಂದಿದ್ದಾರೆ. ಎಷ್ಟೋ ಜನ ಬೇರೆ ಭಾಷೆಯವರೂ ನನ್ನ ಜತೆ ಕನ್ನಡದಲ್ಲೇ ಮಾತನಾಡಲು ಪ್ರಯತ್ನಿಸುತ್ತಾರೆ. ಇನ್ನು, ನಮ್ಮ ಧಾರವಾಹಿಯಲ್ಲಿ ಬರುವ ಸಾಮಾಜಿಕ ಕಳಕಳಿಯ ಸಂದೇಶಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಮೂಗರು, ಕಿವುಡರು ಮುಂತಾದವರೂ ನೋಡುತ್ತಾರೆ ಎಂದರೆ ನಾನು ಅವರ ಅಭಿಮಾನಕ್ಕೆ ತಲೆಬಾಗಬೇಕಷ್ಟೇ.

·  ಕೊನೆಯದಾಗಿ, ಟಿಆರ್ ಪಿ ವಿಚಾರದಲ್ಲಿ ನಾವೇ ನಂಬರ್ 1 ಎಂದು ಕಿತ್ತಾಡುವ ಅಭಿಮಾನಿಗಳಿಗೆ ಒಂದು ಕಿವಿ ಮಾತು ಹೇಳಿ?
ಆಕಾಶದಲ್ಲಿರುವ ಎಲ್ಲಾ ನಕ್ಷತ್ರಗಳಿಗೂ ಅದರದ್ದೇ ಆದ ಸ್ಥಾನವಿರುತ್ತದೆ. ಎಲ್ಲಾ ಧಾರವಾಹಿಗಳೂ ಒಳ್ಳೆಯ ಧಾರವಾಹಿಗಳೇ. ನಮ್ಮ ಅದೃಷ್ಟ ಏನೆಂದರೆ ನಾವು ತುಂಬಾ ಜನಕ್ಕೆ ರೀಚ್ ಆಗಿದ್ದೀವಿ. ಎಲ್ಲಾ ಧಾರವಾಹಿ ತಂಡಗಳೂ ಅವರದ್ದೇ ಆದ ಶ್ರಮವಹಿಸಿರುತ್ತಾರೆ. ಅಭಿಮಾನಿಗಳಿಗೆ ತಮ್ಮ ಧಾರವಾಹಿ, ಕಥಾ ಪಾತ್ರಗಳ ಬಗ್ಗೆ ಪೊಸೆಸಿವ್ ನೆಸ್ ಇರುತ್ತದೆ. ಅದು ಅವರ ಅಭಿಮಾನ ಅಷ್ಟೇ. ಅವರಿಗೆ ನಾವು ಕುಟುಂಬದ ವ್ಯಕ್ತಿಯೇ ಆಗಿರುತ್ತೇವೆ. ಹಾಗಾಗಿ ನನಗೆ ಒಳ್ಳೆದೇ ಆಗಬೇಕು ಎನ್ನುವ ಭಾವನೆಯಿರುತ್ತದೆ.  ನೆಗೆಟಿವ್ ದೃಶ್ಯ, ಸನ್ನಿವೇಶ ಏನಾದ್ರೂ ಆದರೆ ಸಹಿಸಿಕೊಳ್ಳಲ್ಲ ಅಷ್ಟೇ. ಅದಕ್ಕಾಗಿ ಕಾಮೆಂಟ್ ಮಾಡ್ತಿರ್ತಾರೆ. ಮತ್ತೆ ಅವರೇ ಮರೆತು ಮುಂದೆ ಹೋಗ್ತಾರೆ. ಅವರೆಲ್ಲರ ಮನೆ ಮಗ ಆಗಿದ್ದೀನಿ ನಾನು. ಈ ಪ್ರೀತಿಗೆ ತಲೆಬಾಗಿ ನಮಿಸೋದಷ್ಟೇ ನನ್ನ ಕೈಲಿ ಮಾಡಲು ಸಾಧ್ಯವಾಗುವುದು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ