ಬೆಂಗಳೂರು:ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್, ಅವರ ಆಪ್ತೆ ಪವಿತ್ರಾ ಗೌಡ ಸೇರಿದಂತೆ 13 ಆರೋಪಿಗಳನ್ನು ವಿಚಾರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ನಟ ದರ್ಶನ್ ಬಂಧನ ಹಿನ್ನೆಲೆಯಲ್ಲಿ ಪ್ರತಿದಿನ ಠಾಣೆ ಮುಂದೆ ಅಭಿಮಾನಿಗಳು ಜಮಾಯಿಸಿ ಜೈಕಾರ ಕೂಗುತ್ತಿದ್ದಾರೆ. ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಿಂದ ಜನರು ದಾಂಗುಡಿ ಇಡುತ್ತಿದ್ದು, ಸ್ಥಳೀಯ ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ.
ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಠಾಣೆಯ ಸುತ್ತಮುತ್ತ 200 ಮೀಟರ್ವರೆಗೂ ಜನರು ಗುಂಪುಗೂಡುವುದು, ಪ್ರತಿಭಟನೆ, ಧರಣಿ ಹಾಗೂ ಮೆರವಣಿಗೆ ಮಾಡದಂತೆ ಜೂನ್ 17ರ ತನಕ ಐದು ದಿನಗಳ ಕಾಲ ನಿಷೇಧಾಜ್ಞೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಇದೇ ವೇಳೆ ಆರೋಪಿಗಳನ್ನು ವಿಚಾರಣೆ ನಡೆಸುತ್ತಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಶಾಮಿಯಾನ ಹೊದಿಸುವಂತೆ ಪೊಲೀಸ್ ಆಯುಕ್ತ ದಯಾನಂದ್ ಸೂಚನೆ ನೀಡಿದ್ದಾರೆ. ಅದರಂತೆ ಠಾಣೆಯ ಸುತ್ತ ಸೈಡ್ ವಾಲ್ ಗಳನ್ನ ಕಟ್ಟಿ, ಆರೋಪಿಗಳು ಕಾಣದಂತೆ ಮಾಡಲಾಗಿದೆ. ಸದ್ಯ ಆಯುಕ್ತರು ಕೂಡ ಪೊಲೀಸ್ ಠಾಣೆಯಲ್ಲಿಯೇ ಇದ್ದಾರೆ. ಜೊತೆಗೆ ಠಾಣೆಯ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ನಿನ್ನೆಯವರೆಗೆ ಅಭಿಮಾನಿಗಳು ಠಾಣೆಯ ಮುಂದೆ ಜಮಾಯಿಸಿದ್ದರು. ಈ ವೇಳೆ ಠಾಣೆ ಮುಂದೆ ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಆದರೆ ಇಂದು ಅಭಿಮಾನಿಗಳು ಕೂಡ ಠಾಣೆಯತ್ತ ಸುಳಿದಿಲ್ಲ. ಆದರೂ ಠಾಣೆಯ ಕಾಂಪೌಂಡ್‌ಗೆ ಶಾಮಿಯಾನ ಕಟ್ಟಿದ್ದು, ಸಾರ್ವಜನಿಕರಲ್ಲಿ ಭಾರೀ ಅನುಮಾನ ಹುಟ್ಟಿಸಿದೆ.