ದರ್ಶನ್ ಅಭಿಮಾನಿಗಳಿಂದ ನಟ ಪ್ರಥಮ್ ಗೆ ಬೆದರಿಕೆ, ದೂರು ದಾಖಲು

Krishnaveni K

ಬುಧವಾರ, 19 ಜೂನ್ 2024 (14:28 IST)
Photo Credit: Facebook
ಬೆಂಗಳೂರು: ಪೊಲೀಸ್ ಠಾಣೆ ಎದುರು ಗುಂಪು ಕಟ್ಟಿ ನಿಂತು ಜೈಕಾರ ಹಾಕುವ ದರ್ಶನ್ ಅಭಿಮಾನಿಗಳಿಗೆ ಲಾಠಿ ತೆಗೆದುಕೊಂಡು ಬಾರಿಸುವೆ ಎಂದಿದ್ದ ನಟ ಪ್ರಥಮ್ ಗೆ ಈಗ ಜೀವಬೆದರಿಕೆ ಬಂದಿದೆ. ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ನಟ ದರ್ಶನ್ ಅರೆಸ್ಟ್ ಆದ ಬೆನ್ನಲ್ಲೇ ನೂರಾರು ಅಭಿಮಾನಿಗಳು ಠಾಣೆ ಬಳಿ ಬಂದು ಜೈ ಡಿ ಬಾಸ್ ಎಂದು ಘೋಷಣೆ ಕೂಗುತ್ತಿದ್ದರು. ಅವರನ್ನು ಪೊಲೀಸರು ಚದುರಿಸುವ ಪ್ರಯತ್ನ ಮಾಡಿದ್ದರು. ಕೆಲವರು ಲಾಠಿ ರುಚಿ ನೋಡಿದ್ದರು. ಈ ಬಗ್ಗೆ ನಟ ಪ್ರಥಮ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದರು.

‘ನಿಮಗೆ ಸಾಧ್ಯವಾದರೆ ನನಗೆ ನಾಳೆಯಿಂದಲೇ ಆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಒಂದು ಕಾನ್ಸ್ ಟೇಬಲ್ ಪೋಸ್ಟ್ ಕೊಡಿಸಿ. ನಾಳೆಯಿಂದ ಒಂದು ಲಾಠಿ ಹಿಡಿದುಕೊಂಡು ಆ ಪೊಲೀಸ್ ಠಾಣೆ ಬಳಿ ಬಂದು ಗುಂಪುಗೂಡುವ ದರ್ಶನ್ ಅಭಿಮಾನಿಗಳನ್ನು ಒಂದೊಂದು ಕೊಟ್ಟು ಓಡಿಸುತ್ತೇನೆ. ಒಬ್ಬರೂ ಮತ್ತೆ ಅಲ್ಲಿಗೆ ಕಾಲಿಡಬಾರದು. ಅಲ್ಲಿ ನಿಂತುಕೊಂಡು ಜೈ ಡಿಬಾಸ್ ಎಂದು ಘೋಷಣೆ ಕೂಗುವವರು ಯಾರೂ ಅವರ ಮನೆಯಲ್ಲಿ ತಮ್ಮ ಅಮ್ಮನಿಗೆ ಒಂದು ಹೊತ್ತು ಹಿಟ್ಟು ಕೂಡಾ ಕೊಡಲ್ಲ’ ಎಂದು ಕಿಡಿ ಕಾರಿದ್ದರು.

ಪ್ರಥಮ್ ಈ ಹೇಳಿಕೆ ದರ್ಶನ್ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಪ್ರಥಮ್ ತೀವ್ರವಾಗಿ ಟ್ರೋಲ್ ಗೊಳಗಾಗಿದ್ದರು. ಅಷ್ಟೇ ಅಲ್ಲದೆ, ನಿರಂತರವಾಗಿ ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರಂತೆ. ಈ ಬಗ್ಗೆ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು ‘ಯಾರು ಯಾರಿಗೋ ಬೇಕಾಗಿ ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ. ನಾನು ತುಂಬಾ ಶಾಂತಿಯಿಂದಲೇ ಇದ್ದೆ. ನೀವೇ ನನ್ನ ಕರ್ನಾಟಕದ ಅಳಿಯ ಫೋನ್ ನಂಬರ್ ಗೆ ಕರೆ ಮಾಡಿ ಜೀವಬೆದರಿಕೆ ಹಾಕುತ್ತಲೇ ಬಂದಿದ್ದೀರಾ, ಇನ್ಮೇಲೆ ನನಗೆ ಬರೋ ಕಾಲ್, ಸೋಷಿಯಲ್ ಮೀಡಿಯಾ ಮೆಸೇಜ್ ಎಲ್ಲವನ್ನೂ ಪೊಲೀಸರೇ ನೋಡಿಕೊಳ್ಳುತ್ತಾರೆ. ಬದುಕು ಸುಂದರವಾದ್ದದ್ದು. ಅಂದಾಭಿಮಾನಿಗಳೇ ನಿಮ್ಮ ತಂದೆ-ತಾಯಿಗಳಿಗಾಗಿ ಮೀಸಲಿಡಿ. ಯಾರಿಗೋಸ್ಕರವೋ ಹಾಳು ಮಾಡಿಕೊಳ್ಳಬೇಡಿ. ಕನ್ನಡಕ್ಕಾಗಿ, ಕಾವೇರಿಗಾಗಿ, ಸಂಸ್ಕೃತಿ ಉಳಿಸುವುದಕ್ಕಾಗಿ ಬೇಕಾದರೆ ಜೈಲಿಗೆ ಹೋಗಿ. ಯಾರಿಗೋಸ್ಕರವೋ ಲೈಫ್ ಹಾಳು ಮಾಡಿಕೊಳ್ಳಬೇಡಿ’ ಎಂದು ಪ್ರಥಮ್ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ