ಅ.25ರಂದು ಅಪ್ಪು ಫ್ಯಾನ್‌ ಡಮ್‌ ಆ್ಯಪ್‌ ಬಿಡುಗಡೆ: ಕಿಚ್ಚ ಸುದೀಪ್ ಧ್ವನಿಯಲ್ಲಿ ಹೊರಬಿತ್ತು ಟ್ರೇಲರ್

Sampriya

ಭಾನುವಾರ, 19 ಅಕ್ಟೋಬರ್ 2025 (13:00 IST)
Photo Credit X
ಬೆಂಗಳೂರು: ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್ ಅವರು ನಿಧನರಾಗಿ ಅಕ್ಟೋಬರ್ 29ಕ್ಕೆ ನಾಲ್ಕು ವರ್ಷ ಪೂರ್ಣಗೊಳ್ಳಲಿದೆ. ಆದರೆ ಅಪ್ಪು ಅವರ ನೆನಪು ಮಾತ್ರ ಅಭಿಮಾನಿಗಳ ಮನಸ್ಸಿನಲ್ಲಿ ಸದಾ ಜೀವಂತವಾಗಿದೆ. 

ಇದೀಗ ಪುನೀತ್‌ ರಾಜ್‌ಕುಮಾರ್ ಕುರಿತಾಗಿ ಅಪ್ಪು ಪಿಆರ್ ಕೆ ಫ್ಯಾನ್ ಡಮ್ ಆ್ಯಪ್ ಸಿದ್ಧವಾಗಿದ್ದು, ಅಕ್ಟೋಬರ್ 25ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ. ಈ ಬಗ್ಗೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಮೂಲಕ ಮಾಹಿತಿ ಹಂಚಿಕೊಂಡಿದ್ದರು.

ಶನಿವಾರ ಈ ಆ್ಯಪ್‌ನ ಟ್ರೇಲರ್ ಬಿಡುಗಡೆಯಾಗಿದ್ದು ನಟ ಸುದೀಪ್ ಧ್ವನಿ ನೀಡಿದ್ದಾರೆ. ಅಪ್ಪು ಅವರ ಜೀವನ, ಸಿನಿಮಾ, ಖಾಸಗಿ ಬದುಕು, ಅವರ ಸಮಾಜ ಸೇವೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸುದೀಪ್ ಮಾತನಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅಶ್ವಿನಿ ಪುನೀತ್ ರಾಜ್‌ಕುಮಾರ್, ಪ್ರತಿ ಅಭಿಮಾನಿಯ ಹೃದಯದಿಂದ - ಪ್ರತಿಯೊಂದು ಮನೆಯವರೆಗೂ ಅಪ್ಪುವಿನ ನೆನಪು ಅಜರಾಮರ...ಪ್ರೀತಿಸುವ ಹೃದಯಗಳಿಂದ ನಿರ್ಮಾಣವಾದ ವಿಶ್ವದ ಮೊಟ್ಟಮೊದಲ ಫ್ಯಾನ್‌ಡಮ್‌ ಆ್ಯಪ್‌. ನಿಜವಾದ ಪ್ರೀತಿ ಎಂದಿಗೂ ಮಾಸುವುದಿಲ್ಲ ಎಂದು ನಂಬುವ ಪ್ರತಿಯೊಬ್ಬ ಅಭಿಮಾನಿಗೆ ಸಮರ್ಪಿತ. ಈ ಭಾವನಾತ್ಮಕ ಪ್ರಯಾಣಕ್ಕೆ ತಮ್ಮ ಶಕ್ತಿಯುತ ಧ್ವನಿಯನ್ನು ನೀಡಿದ್ದಕ್ಕಾಗಿ ಕಿಚ್ಚ ಸುದೀಪ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದಿದ್ದಾರೆ.

ಅ.25ರಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕರು ಆ್ಯಪ್ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇನ್ನು, ಈ ಅಪ್ಲಿಕೇಶನ್ ನಲ್ಲಿ ಪುನೀತ್ ರಾಜ್ ಕುಮಾರ್ ಕುರಿತಾದ ವಿಶೇಷ ಮಾಹಿತಿ ಇರಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್‌, ಜೊತೆಗಿರದ ಜೀವ ಎಂದಿಗೂ ಜೀವಂತ... ಆ ಜೀವ ಇದೀಗ ನಮ್ಮೆಲ್ಲರಿಗೂ ಮತ್ತಷ್ಟು ಹತ್ತಿರವಾಗುತ್ತಿದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ