ಬೆಂಗಳೂರು: ಮೇಕೆದಾಟು ಹೋರಾಟ ವಿಚಾರದಲ್ಲಿ ಕನ್ನಡ ನಟರು ಪಾಲ್ಗೊಳ್ಳುತ್ತಿಲ್ಲ ಎಂಬ ಅರ್ಥದಲ್ಲಿ ಮಾತನಾಡಿರುವ ಡಿಕೆ ಶಿವಕುಮಾರ್ ಹೇಳಿಕೆ ಸಮರ್ಥಿಸಿರುವ ನಟಿ ರಮ್ಯಾಗೆ ನೀವು ಎಷ್ಟು ಹೋರಾಟದಲ್ಲಿ ಭಾಗಿಯಾಗಿದ್ದೀರಿ ಎಂದು ನೆಟ್ಟಿಗರು ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರು ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಸಾಕಷ್ಟು ಸ್ಟಾರ್ ಕಲಾವಿದರು ಗೈರಾಗಿದ್ದರು. ಇದು ಡಿಕೆ ಶಿವಕುಮಾರ್ ಸಿಟ್ಟಿಗೆ ಕಾರಣವಾಗಿತ್ತು. ಇದೇ ಸಂದರ್ಭದಲ್ಲಿ ಅವರು ಮೇಕೆದಾಟು ಹೋರಾಟ, ಕನ್ನಡ ಪರ ಹೋರಾಟದಲ್ಲೂ ಕಲಾವಿದರು ಪಾಲ್ಗೊಳ್ಳಲ್ಲ ಎಂದು ಗರಂ ಆಗಿ ಹೇಳಿದ್ದರು. ಅಲ್ಲದೆ ಎಲ್ಲರ ನಟ್ಟು ಬೋಲ್ಟ್ ಸರಿ ಮಾಡ್ತೀನಿ ಎಂದಿದ್ದರು.
ಅವರ ಈ ಹೇಳಿಕೆ ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ನಿನ್ನೆ ಹಂಪಿ ಉತ್ಸವದಲ್ಲಿ ಭಾಗಿಯಾಗಿದ್ದ ನಟಿ ರಮ್ಯಾಗೆ ಮಾಧ್ಯಮಗಳು ಇದೇ ಡಿಕೆಶಿ ಹೇಳಿದ್ದು ಸರಿಯಾ ಎಂದು ಪ್ರಶ್ನೆ ಮಾಡಿವೆ. ಅದಕ್ಕೆ ರಮ್ಯಾ, ನನಗನಿಸುವ ಪ್ರಕಾರ ಸಾಹೇಬ್ರು ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ನೀವು ಡಾ. ರಾಜ್ ಕುಮಾರ್ ಅವರನ್ನೇ ನೋಡಿ. ಕನ್ನಡ ಪರ ಹೋರಾಟ ಅಂದಾಗ ಮುಂಚೂಣಿಯಲ್ಲಿರುತ್ತಿದ್ದರು. ಅದೇ ರೀತಿ ಈಗಿನ ನಟರು ಇರಬೇಕು ಎಂದು ಹೇಳಿರಬಹುದು. ಅದು ನಮ್ಮ ಕರ್ತವ್ಯ ಎಂದು ಮಾತನಾಡಿದ್ದಾರೆ.
ಆದರೆ ರಮ್ಯಾ ಹೇಳಿಕೆಗೆ ನೆಟ್ಟಿಗರು ಟಾಂಗ್ ಕೊಟ್ಟಿದ್ದಾರೆ. ಮೊದಲು ನೀವು ಹೋರಾಟದಲ್ಲಿ ಭಾಗಿಯಾಗಿ. ನಂತರ ಬೇರೆ ನಟರಿಗೆ ಹೇಳಿ ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ನೀವೂ ಅದೇ ಸ್ಯಾಂಡಲ್ ವುಡ್ ನವರು ಎಂಬುದನ್ನು ಮರೆಯಬೇಡಿ ಎಂದಿದ್ದಾರೆ. ಕನ್ನಡ ವಿಚಾರಕ್ಕೆ ನೀವು ಎಷ್ಟು ಸಲ ನಿಂತಿದ್ದೀರಿ ಹೇಳಿ ಎಂದು ಪ್ರಶ್ನೆ ಮಾಡಿದ್ದಾರೆ.