ಅಂಬರೀಷ್‌ ಆಪ್ತ ಸ್ನೇಹಿತ, ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಎ.ಟಿ. ರಘು ಇನ್ನಿಲ್ಲ

Sampriya

ಶುಕ್ರವಾರ, 21 ಮಾರ್ಚ್ 2025 (14:12 IST)
Photo Courtesy X
ಬೆಂಗಳೂರು: ಮಂಡ್ಯದ ಗಂಡು ಸೇರಿದಂತೆ ಸ್ಯಾಂಡಲ್‌ವುಡ್‌ನಲ್ಲಿ ಹಲವು ಹಿಟ್‌ ಸಿನಿಮಾಗಳಿಗೆ ಆಕ್ಷನ್‌ ಕಟ್‌ ಹೇಳಿದ್ದ ಹಿರಿಯ ನಿರ್ದೇಶಕ  ಎ.ಟಿ. ರಘು ಅವರು ಗುರುವಾರ ನಿಧನರಾದರು. 76 ವರ್ಷದ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು.

ರೆಬೆಲ್‌ ಸ್ಟಾರ್‌ ಅಂಬರೀಷ್‌ ಅವರ ಆಪ್ತ ಸ್ನೇಹಿತನಾಗಿದ್ದ ರಘು ಅವರು ತಮ್ಮ ವೃತ್ತಿ ಬದುಕಿನಲ್ಲಿ‌ 32 ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದರು. ಈ ಪೈಕಿ 22 ಸಿನಿಮಾಗಳು ಅಂಬರೀಶ್ ಅವರಿಗೆ ಆಕ್ಷನ್‌ ಕಟ್ ಹೇಳಿದ್ದರು.

ಮಡಿಕೇರಿಯಲ್ಲಿ ಜನಿಸಿದ್ದ ರಘು ಅವರು ಮಿಸ್‌ ಲೀಲಾವತಿ ಎಂಬ ಸಿನಿಮಾದಲ್ಲಿ ಕಿರು ಪಾತ್ರವೊಂದಕ್ಕೆ ಬಣ್ಣ ಹಚ್ಚುವುದರ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಮೂರೂವರೆ ವಜ್ರಗಳು ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಅವರು ನಂತರ ಹಲವು ಚಿತ್ರಗಳಲ್ಲಿ ಸಹಾಯಕ, ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು.

ದೇವರ ಕಣ್ಣು ಚಿತ್ರದ ಸಂದರ್ಭದಲ್ಲಿ ರಘು ಹಾಗೂ ಅಂಬರೀಶ್ ಸ್ನೇಹಿತರಾದರು. ಆ ಚಿತ್ರದಲ್ಲಿ ರಘು ಸಹ ನಿರ್ದೇಶಕರಾಗಿದ್ದರು. ನ್ಯಾಯ ನೀತಿ ಧರ್ಮ ಸಿನಿಮಾ ಮೂಲಕ ನಿರ್ದೇಶಕರಾದ ರಘು, ಅಂಬರೀಶ್ ಅವರಿಗೆ ಆ್ಯಕ್ಷನ್ ಕಟ್ ಹೇಳಿದರು. ಶಂಕರ್‌‌ ಸುಂದರ್, ಪ್ರೀತಿ, ಆಶಾ, ಇನ್‌ಸ್ಪೆಕ್ಟರ್ ಕ್ರಾಂತಿಕುಮಾರ್, ಗುರು ಜಗದ್ಗುರು‌ ಮುಂತಾದ ಸಿನಿಮಾಗಳನ್ನು ರಘು ನಿರ್ದೇಶಿಸಿದರು. ಟೈಗರ್ ಪ್ರಭಾಕರ್ ನಟಿಸಿದ ಕಾಡಿನ ರಾಜ‌ ಸಿನಿಮಾವನ್ನೂ ರಘು ನಿರ್ದೇಶಿಸಿದ್ದರು.

ಎ ಟಿ ರಘು ಅವರಿಗೆ ಕರ್ನಾಟಕ ಸರ್ಕಾರದ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿವೆ. ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಲಾಸಾಗರ ಸಂಗೀತ ನೃತ್ಯ ನಾಟಕ ಅಕಾಡೆಮಿ ಪ್ರಶಸ್ತಿಗಳಿಗೂ  ರಘು ಭಾಜರಾಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ