ಬೆಂಗಳೂರು: ನಾಳೆ ಕನ್ನಡ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಈ ದಿನ ಸರ್ಕಾರೀ ಬಸ್ ಓಡಾಟವಿರುತ್ತದಾ ಎಂಬ ಪ್ರಶ್ನೆಗೆ ಸ್ವತಃ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರೇ ಹೇಳಿಕೆ ನೀಡಿದರೂ ಗೊಂದಲ ಮುಗಿದಿಲ್ಲ.
ಕರ್ನಾಟಕ ಬಂದ್ ಗೆ ಕೆಲವರು ಬೆಂಬಲ ವ್ಯಕ್ತಪಡಿಸಿಲ್ಲ. ಮತ್ತೆ ಕೆಲವರು ಕೇವಲ ನೈತಿಕ ಬೆಂಬಲ ಎನ್ನುತ್ತಿದ್ದಾರೆ. ಶಾಲೆಗಳಿಗೆ ರಜೆ ಇರಲಿದೆಯೇ ಎಂಬುದಕ್ಕೆ ಸ್ಪಷ್ಟನೆ ಸಿಕ್ಕಿಲ್ಲ. ಈ ನಡುವೆ ಕನಿಷ್ಠ ಪಕ್ಷ ನಿತ್ಯದ ಓಡಾಟಕ್ಕೆ ಬಸ್ ಇರುತ್ತದಾ ಎಂಬ ಪ್ರಶ್ನೆ ಎಲ್ಲರಲ್ಲಿದೆ.
ಆ ಪ್ರಶ್ನೆಯನ್ನು ಸ್ವತಃ ಸಚಿವ ರಾಮಲಿಂಗಾ ರೆಡ್ಡಿಯವರಿಗೆ ಕೇಳಿದಾಗಲೂ ಗೊಂದಲ ಬಗೆಹರಿದಿಲ್ಲ. ನಾಳೆ ಕನ್ನಡ ನೆಲ, ಜಲ ವಿಚಾರವಾಗಿ ಕನ್ನಡ ಪರ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ. ಕನ್ನಡದ ಪರ ಅವರ ಕಾಳಜಿ ಮೆಚ್ಚುವಂತದ್ದು ಎಂದ ರಾಮಲಿಂಗಾ ರೆಡ್ಡಡಿ ಬಸ್ ಇರುತ್ತದಾ ಎಂಬ ಪ್ರಶ್ನೆಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.
ನಾಳೆ ಬಂದ್ ಮಾಡಬೇಕೋ ಬೇಡವೋ ಎಂಬ ಬಗ್ಗೆ ಸಾರಿಗೆ ನೌಕರರ ಒಕ್ಕೂಟಗಳು ತೀರ್ಮಾನ ಮಾಡಬೇಕು. ಅವರು ಏನು ತೀರ್ಮಾನ ಮಾಡಿದ್ದಾರೋ ಗೊತ್ತಿಲ್ಲ. ಅವರು ಬಂದ್ ಗೆ ಬೆಂಬಲ ಕೊಡುತ್ತೇವೆ ಎಂದರೆ ಬಸ್ ಇರಲ್ಲ, ಬೆಂಬಲ ಇಲ್ಲ ಅಂದರೆ ಬಸ್ ಇರುತ್ತದೆ ಎಂದು ಹೇಳಿಕೆ ನೀಡಿ ಮತ್ತಷ್ಟು ಗೊಂದಲ ಮೂಡಿಸಿದ್ದಾರೆ.